ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(85) ಅವರು ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ಬೆಳಗ್ಗೆಯಿಂದ ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನೆಲಮಂಗಲ ಸುತ್ತಮುತ್ತಲಿನ ಗ್ರಾಮಸ್ಥರು, ಸಿನಿಮಾ ಅಭಿಮಾನಿಗಳು, ಹಾಗೂ ಕಲಾವಿದರು ಮತ್ತು ತಂತ್ರಜ್ಞರು ಮೈದಾನಕ್ಕೆ ಆಗಮಿಸಿ ಅಗಲಿದ ನೆಚ್ಚಿನ ನಟಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನೆಲಮಂಗಲದ ಸೋಲದೇವನಹಳ್ಳಿ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.
ಬೆಳಗ್ಗೆ 10 ಗಂಟೆವರೆಗೂ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲೇ ಪಾರ್ಥೀವ ಶರೀರ ಇರಿಸಲಾಗುತ್ತಿದ್ದು, ನಂತರ ಬೆಂಗಳೂರಿನತ್ತ ತಗೆದುಕೊಂಡು ಹೋಗಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿರುವ ಸಂಸ ಬಯಲು ರಂಗ ಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಿಎಂ ಸಿದ್ಧರಾಮಯ್ಯ ಸೇರಿದಂತೆ ಸಚಿವ ಸಂಪುಟದ ಅನೇಕ ಸಚಿವರು ಹಾಗೂ ಚಿತ್ರೋದ್ಯಮದ ಗಣ್ಯರು ಆಗಮಿಸಿ, ಅಂತಿಮ ದರ್ಶನ ಪಡೆಯಲಿದ್ದಾರೆ.
ಲೀಲಾವತಿ ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ನಿನ್ನೆ ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ.
1938ರಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು. ರಾಜ್ಕುಮಾರ್, ವಿಷ್ಣುವರ್ಧನ್ ಮುಂತಾದವರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.










