ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಎನ್ಡಿಎಗೆ ಬಹುಮತ ಬರಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟಕ್ಕೆ ಬಹುಮತ ಬರುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇಶದಲ್ಲಿ ಮತ್ತೆ ಎನ್ಡಿಎ ಅಧಿಕಾರಕ್ಕೆ ಬರುವ ವಿಚಾರದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ”ದೇಶದಲ್ಲಿ ಎನ್ಡಿಎಗೆ ಬಹುಮತ ಬರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗಲಿದೆ” ಎಂದರು.
ಎನ್ಐಎ ತಂಡಕ್ಕೆ ಧನ್ಯವಾದ: ”ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಗಳನ್ನು ಎನ್ಐಎ ಹಾಗೂ ರಾಜ್ಯ ಪೊಲೀಸರು ಕೋಲ್ಕತ್ತಾದಲ್ಲಿ ಸೆರೆ ಹಿಡಿದಿದ್ಧಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಉಳಿದ ವಿಚಾರಗಳು ತನಿಖೆಯಿಂದ ಗೊತ್ತಾಗಲಿದೆ” ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯಕ್ಕೆ ಮೋದಿ ಕೊಡುಗೆ ಏನು : ”ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಬರುತ್ತಿರುವುದು ನನಗೇನೂ ಅಭ್ಯಂತರವಿಲ್ಲ. ಆದರೆ, ರಾಜ್ಯಕ್ಕೆ ಮೋದಿ ಅವರ ಕೊಡುಗೆ ಏನು? ಎಂಬುದನ್ನು ರಾಜ್ಯದ ಜನರಿಗೆ ತಿಳಿಸಲಿ” ಎಂದು ಸಿಎಂ ಒತ್ತಾಯಿಸಿದರು.










