ಚಿಕ್ಕಮಗಳೂರು: ಲೋಕಸಭೆ ಚುನಾವಣೆಗೆ ಏಪ್ರಿಲ್ 26ರಂದು ಮತದಾನ ನಡೆಯಲಿರುವ ಕಾರಣ 25 ಮತ್ತು 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್ಗೆ ಅವಕಾಶ ನೀಡದಂತೆ ಜಿಲ್ಲೆಯ ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮತದಾನದ ದಿನ ರಜೆ ಇರುವ ಕಾರಣ ವಾರಾಂತ್ಯದ ರಜೆಯ ಉಪಯೋಗ ಪಡೆದು ಜನರು ಪ್ರವಾಸಕ್ಕೆ ತೆರಳಿದರೆ ಮತದಾನ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಮತದಾನ ಪ್ರಮಾಣ ಹೆಚ್ಚಿಸಲು ಈ ಮೂಲಕ ನೆರವಾಗಬೇಕು ಎಂದು ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಚುನಾವಣೆ ದಿನದಂದೂ ರಜೆ ನೀಡಲಾಗುತ್ತಿದ್ದು, ಹೀಗಾಗಿ ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಜಿಲ್ಲೆಯ ಹೋಂ ಸ್ಟೇ ಹಾಗೂ ರೇಸಾರ್ಟ್ ಮಾಲೀಕರಿಗೆ ಈಗಾಗಲೇ ಲಿಖಿತ ಸೂಚನೆ ಕಳುಹಿಸಿದ್ದಾರೆ.
ರಾಜ್ಯದ ಎಲ್ಲ ಭಾಗಗಳಲ್ಲಿ ಅತ್ಯಧಿಕ ಮತದಾನ ದಾಖಲಿಸುವ ನಿಟ್ಟಿನಲ್ಲಿ ಈ ಕ್ರಮವನ್ನ ಕೈಗೊಳ್ಳಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.










