ಹಿಮಾಚಲ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಇದು ದೇಶದಲ್ಲಿ ಓಡುತ್ತಿರುವ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಈ ರೈಲು ದೆಹಲಿಯಿಂದ ಹಿಮಾಚಲದ ಉನಾ ಜಿಲ್ಲೆಯ ಅಂಡೌರಾಗೆ ವಾರದಲ್ಲಿ 6 ದಿನಗಳು ಚಲಿಸುತ್ತದೆ.
ವಂದೇ ಭಾರತ್ ರೈಲು ಕೇವಲ 52 ಸೆಕೆಂಡ್ ಗಳಲ್ಲೇ 100 ಕಿ. ಮೀ ವೇಗದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ವಿಶ್ವ ದರ್ಜೆಯ ಈ ರೈಲನ್ನು ಭಾರತೀಯ ಎಂಜಿನಿಯರ್ ಗಳು ನಿರ್ಮಿಸಿರೋದು ಹೆಮ್ಮೆಯ ವಿಚಾರವಾಗಿದೆ. ಈ ರೈಲು ಅಂಬ್-ಅಂಡೌರಾದಿಂದ 1 ಗಂಟೆಗೆ ಹೊರಟು ದೆಹಲಿಯನ್ನು 6.25 ಗಂಟೆಗೆ ತಲುಪುತ್ತದೆ. ಆನಂದಪುರ ಸಾಹಿಬ್, ಅಂಬಾಲಾ ಮತ್ತು ಚಂಡೀಗಢ ಅದರ ನಿಲುಗಡೆ ನಿಲ್ದಾಣಗಳಾಗಿವೆ. ಇದು ದೇಶದಲ್ಲೇ ತಯಾರಾದ ಅರೆ ವೇಗದ ರೈಲು.
ಫೆಬ್ರವರಿ 15, 2019ರಂದು ದೇಶದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ದೆಹಲಿ ಮತ್ತು ವಾರಣಾಸಿ ನಡುವೆ ಓಡಿಸಲಾಯಿತು. ವಂದೇ ಭಾರತ್ ರೈಲು ಸಂಪೂರ್ಣ ದೇಶೀಯ ತಂತ್ರಜ್ಞಾನ ಹೊಂದಿದ್ದು, ಎಲ್ಲಾ ಅತ್ಯಾಧುನಿಕ ಸೌಲಭ್ಯಗಳೂ ಇವೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಶೀಘ್ರದಲ್ಲೇ ರಾಜ್ಯದಲ್ಲೂ ಸಾಕಾರಗೊಳ್ಳಲಿದೆ.










