ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ತಾಂಡಾದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಅಶೋಕಕುಮಾರ ಲಮಾಣಿ ಎಂಬುವರ ವಿರುದ್ಧ ಮತಾಂತರ ಮಾಡಿರುವ ಆರೋಪ ವ್ಯಕ್ತವಾಗಿದೆ. ವಿಜಯಲಕ್ಷ್ಮಿ ಅಶೋಕ್ ಕುಮಾರ್ ಉಪ್ಪಲದಿನ್ನಿ ತಾಂಡಾದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈಕೆ ಕೆಲಸ ವೇಳೆ ತಾಂಡಾದ ಜನರ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾಳೆ ಎಂದು ಗ್ರಾಮಸ್ಥರಿಂದ ಆರೋಪ ಕೇಳಿಬಂದಿದೆ. ಇದರಿಂದ ರೊಚ್ಚಿಗೆದ್ದು ಗಲಾಟೆ ನಡೆಸಿರುವ ಗ್ರಾಮಸ್ಥರು ವಿಜಯಲಕ್ಷ್ಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಈ ಮಧ್ಯೆ, ತಹಶಿಲ್ದಾರ್ ಯಮನಪ್ಪ, ಸಿಪಿಐ ಶರಣಗೌಡ ನ್ಯಾಮಗೌಡರ ಅವರು ತಾಂಡಾಕ್ಕೆ ಆಗಮಿಸಿ ಶಾಂತಿ ಸಭೆ ನಡೆಸಿದ್ದಾರೆ. ಈ ವೇಳೆ ಆಶಾ ಕಾರ್ಯಕರ್ತೆ ಆರೋಪ ನಿರಾಕರಣೆ ಮಾಡಿದ್ದಾರೆ. ತಾಂಡಾದ ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ತಾಂಡಾದ ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶಾಂತಿ ಸಭೆಯಲ್ಲಿ ಆಶಾ ಕಾರ್ಯಕರ್ತೆ ಬೆದರಿಕೆ ಹಾಕಿದ್ದಾರೆ.
ಅಷ್ಟೇ ಅಲ್ಲದೇ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ತಾಂಡಾದ ಮುಖಂಡರ ವಿರುದ್ಧವೇ ವಿಜಯಲಕ್ಷ್ಮಿ ದೂರು ನೀಡಿದ್ದಾಳೆ. ಅದಕ್ಕೆ ಪ್ರತಿಯಾಗಿ ತಾಂಡಾದ ಮುಖಂಡರು ಸಹ ದೂರು ದಾಖಲಿಸಿದ್ದಾರೆ. ಸದ್ಯ ತಾಂಡಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.










