ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್.

43
firstsuddi

ನವದೆಹಲಿ : ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್ 4 ತಿಂಗಳ ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲಾದ 40 ಮಿಲಿಯನ್ ಡಾಲರ್ ಗಳನ್ನು ಹಿಂದಿರುಗಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮಾರ್ಚ್ 10 ರಂದು ಮದ್ಯದ ದೊರೆ ವಿರುದ್ಧದ ವಿಚಾರಣೆಯು `ಡೆಡ್ ವಾಲ್’ ಪ್ರಕರಣದಲ್ಲಿ ತೀರ್ಪನ್ನು ಕಾಯ್ದಿರಿತ್ತು. ಈ ಕುರಿತು ನಡೆದ ವಿಚಾರಣೆ ವೇಳೆ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರ ವಾದವನ್ನು ಆಲಿಸಿದ ಬಳಿಕ ಮಾರ್ಚ್ 15 ರೊಳಗೆ ಲಿಖಿತ ದಾಖಲೆಗಳನ್ನು ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಸೂಚನೆ ನೀಡಿತ್ತು.

9 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಮಲ್ಯ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅವರು ಆಸ್ತಿಯನ್ನು ಬಹಿರಂಗಪಡಿಸುತ್ತಿಲ್ಲ ಮತ್ತು ನಿರ್ಬಂಧದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ 40 ಮಿಲಿಯನ್ ಡಾಲರ್ ವರ್ಗಾವಣೆ ಮಾಡಿದ್ದಕ್ಕಾಗಿ 2017ರ ತೀರ್ಪನ್ನು ಅವಹೇಳನ ಮಾಡಿದ ಮಲ್ಯ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ. ಮಲ್ಯ ಅವರ ಮನವಿಯನ್ನು 2020 ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಮಲ್ಯ ಅವರು ಮಾರ್ಚ್ 2016 ರಿಂದ ಇಂಗ್ಲೆಂಡಿನಲ್ಲಿದ್ದಾರೆ. ಏಪ್ರಿಲ್ 18, 2017 ರಂದು ಸ್ಕಾಟ್ಲೆಂಡ್ ಯಾರ್ಡ್ ಜಾರಿಗೊಳಿಸಿದ ಹಸ್ತಾಂತರ ವಾರಂಟ್ ನ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.