ಚಿಕ್ಕಮಗಳೂರು : ಮಕ್ಕಳು ವಿದ್ಯಾರ್ಥಿ ದೆಸೆಯಲ್ಲೇ ರಾಷ್ಟ್ರಭಕ್ತಿ ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ಭಾರತ ಸೇವಾದಳದ ತಾಲ್ಲೂಕು ಉಪಾಧ್ಯಕ್ಷ ಸಿ.ಸಿ.ಈರೇಗೌಡ ಸಲಹೆ ನೀಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿರುವ ರಾಷ್ಟ್ರಧ್ವಜ-ರಾಷ್ಟ್ರಗೀತೆ ಸ್ಪರ್ಧೆಗೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಅನಾಯಾಸವಾಗಿ ಲಭಿಸಿಲ್ಲ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ದೇಶಭಕ್ತರು ತ್ಯಾಗ, ಬಲಿದಾನ ಮಾಡಿದ್ದಾರೆ ರಾಷ್ಟ್ರಭಕ್ತರ ಪ್ರಾಣ ತ್ಯಾಗದಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದರು.
ನಮ್ಮ ರಾಜರುಗಳಲ್ಲಿ ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ದೇಶ ಬ್ರಿಟೀಶರ ಪಾಲಾಗಿತ್ತು ಎಂದ ಅವರು ಇಂದಿನ ಪೀಳಿಗೆ ಈ ಸತ್ಯವನ್ನು ಅರಿಯಬೇಕು ಎಲ್ಲರೂ ಒಂದಾಗಿ ಬಾಳುವುದನ್ನು ಕಲಿಯಬೇಕು, ದೇಶಕ್ಕಾಗಿ ಬಾಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿ.ಆರ್.ಪಿ ಪೂರ್ಣೇಶ್ ಮಾತನಾಡಿ ನೆಲ, ಜಲ, ಭಾಷೆ, ಧರ್ಮ, ಮತ ಸೇರಿದಂತೆ ಯಾವುದೇ ವಿಷಯಗಳಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯವಿದ್ದರೂ ಸಹ ದೇಶದ ವಿಷಯ ಬಂದಾಗ ಎಲ್ಲರೂ ಒಂದಾಗಿ ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ತಮಿಳು ಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಗೀತೆ ಬರೆಯುವ ಸ್ಪರ್ಧೆ, ರಾಷ್ಟ್ರಧ್ವಜ ಬಿಡಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ ನಡೆಸಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿ.ಆರ್.ಪಿ ರಮ್ಯಶ್ರೀ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ತಮಿಳು ಶಾಲೆಯ ಮುಖ್ಯಶಿಕ್ಷಕಿ ವಾಣಿ, ಶಿಕ್ಷಕರಾದ ನಾಗರಾಜ್, ಜಯಂತಿ, ಸಾವಿತ್ರಿ, ನಾಗವೇಣಿ ಉಪಸ್ಥಿತರಿದ್ದರು.










