ವಿದ್ಯಾರ್ಥಿಗಳಿಂದ ಪ್ರತಿಭಟನೆ: ಮೈಸೂರು ವಿ.ವಿ ಪದವಿ ಪರೀಕ್ಷೆಗಳು ಮುಂದೂಡಿಕೆ…

50
firstsuddi

ಮೈಸೂರು: ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಸರಿಯಾಗಿ ಪಾಠ ಪ್ರವಚನ ನಡೆಯದ ಕಾರಣ ಪದವಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಎಐಡಿಎಸ್‍ಒ ಸಂಘಟನೆ, ಮೈಸೂರಿನ ಕ್ರಾಫರ್ಡ್ ಹಾಲ್ ಬಳಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದಿರುವ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ. ಶೈಲಜಾ ಪದವಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ವಿಧಾನಸಭೆ ಚುನಾವಣೆಗಾಗಿ ಕಾಲೇಜಿನ ಕಟ್ಟಡಗಳನ್ನು ಬಳಸಿಕೊಳ್ಳಲಾಗಿತ್ತು. ಹೀಗಾಗಿ ಪಾಠಗಳು ಸಮರ್ಪಕವಾಗಿ ನಡೆದಿಲ್ಲ. ಪದವಿ ಕಾಲೇಜುಗಳಲ್ಲಿ 4 ತಿಂಗಳು ನಡೆಯಬೇಕಾಗಿದ್ದ ಪಾಠ ಪ್ರವಚನಗಳು ಕೇವಲ 2 ತಿಂಗಳಷ್ಟೇ ನಡೆದಿದ್ದವು. ಇದುವರೆಗೆ ಪಠ್ಯಕ್ರಮವೂ ಲಭ್ಯವಾಗಿಲ್ಲ. ಭಾನುವಾರ ಕೂಡ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ. ಕೇವಲ ಒಂದು ವಾರದಲ್ಲಿ ಎಲ್ಲಾ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕನಿಷ್ಠ 15 ದಿನಗಳ ಕಾಲ ಪರೀಕ್ಷೆ ಮುಂದೂಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಸದ್ಯ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದಿರುವ ಮೈಸೂರು ವಿವಿ ಇಂದು ಬೆಳಗ್ಗೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆಯಾದ ವಿ. ಶೈಲಜಾ ಪದವಿ ಪರೀಕ್ಷೆಗಳನ್ನು ಆಗಸ್ಟ್ 1ಕ್ಕೆ ಮುಂದೂಡಿಕೆ ಮಾಡಿ ಆದೇಶಿಸಿರುವುದಾಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.