ಬಳ್ಳಾರಿ: ಮದುವೆಯಾಗಿ ಮಕ್ಕಳಿದ್ದರೂ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿದ ಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿರುವ ಘಟನೆ ಜಿಲ್ಲೆಯ ಕುರಗೋಡ್ ತಾಲೂಕಿನ ಯಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಕೃಷ್ಣಮೂರ್ತಿ ಅಮಾನತುಗೊಂಡ ಶಿಕ್ಷಕ. ಯಲ್ಲಾಪುರ ಗ್ರಾಮದಲ್ಲೆ ಮನೆ ಮಾಡಿಕೊಂಡಿದ್ದ ಶಾಸ್ತ್ರಿ ಕೃಷ್ಣಮೂರ್ತಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಶಾಲಾ ಮಕ್ಕಳನ್ನು ಮನೆಗೆ ಕರೆಯಿಸಿಕೊಂಡು ಮನೆ ಕೆಲಸ ಮಾಡಿಸಿಕೊಂಡು ಮಕ್ಕಳಿಗೆ ಕಿರುಕುಳ ನೀಡಿ ಅನುಚಿತವಾಗಿ ವರ್ತನೆ ತೋರಿದ್ದಾನೆ.
ಇನ್ನು ಶಾಲೆ ಪ್ರಾರಂಭವಾದ ಬಳಿಕ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ. ವಿದ್ಯಾರ್ಥಿಗಳು ಏನಾದರೂ ಕೇಳಿದರೆ ಮನೆಗೆ ಬನ್ನಿ ಅಲ್ಲಿ ನಿಮಗೆ ಟ್ಯೂಷನ್ ಹೇಳಿಕೊಡ್ತೇನೆ, ಅಲ್ಲಿಯೇ ನಿಮಗೆ ಪಾಠ ಮಾಡೋದಾಗಿ ಹೇಳುತ್ತಿದ್ದ. ಆದರೆ, ವಿದ್ಯಾರ್ಥಿನಿಯರು ಮನೆಗೆ ಬಂದಾಗ ಮನೆಗೆಲಸ ಮಾಡಿಸೋ ನೆಪದಲ್ಲಿ ಹೊಡೆಯುವುದು ಬೈಯುವುದು ಸೇರಿದಂತೆ ಮಾನಸಿಕ ಹಿಂಸೆ ನೀಡಿ ಅನುಚಿತವಾಗಿ ವರ್ತನೆ ಮಾಡುತ್ತಿದ್ದನು.
ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಅನುಚಿತ ವರ್ತನೆ ಬಗ್ಗೆ ಪೋಷಕರಿಗೆ ಮೊದಲು ತಿಳಿಸಿದ್ದಾರೆ. ಬಳಿಕ ಎಸ್ ಡಿಎಂಸಿ ಸದಸ್ಯರಿಗೆ ತಿಳಿಸಿ ಅಲ್ಲಿಂದ ಕುರುಗೋಡು ಬಿಇಓ ಅವರಿಗೆ ದೂರನ್ನು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು, ತನಿಖೆ ನಡೆಸಿದ ವೇಳೆ ಶಿಕ್ಷಕ ಕೃಷ್ಣಮೂರ್ತಿಯ ಕಿತಾಪತಿ ಬಯಲಿಗೆ ಬಂದಿದೆ. ವಿದ್ಯಾರ್ಥಿಗಳ ದೂರಿನ ಮೇರೆಗೆ ಶಿಕ್ಷಣ ಇಲಾಖೆಯು ಶಿಕ್ಷಕ ಕೃಷ್ಣಮೂರ್ತಿಯನ್ನು ಅಮಾನತು ಮಾಡಿ, ಇಲಾಖೆ ವಿಚಾರಣೆ ಕಾಯ್ದಿರಿಸಿದೆ. ಆರೋಪ ಕೇಳಿಬರುತ್ತಿದ್ದಂತೆ ಶಿಕ್ಷಕ ಕೃಷ್ಣಮೂರ್ತಿ ಪರಾರಿಯಾಗಿದ್ದಾನೆ.










