ವಿದ್ಯುತ್ ತಂತಿ ತುಳಿದು ತಾಯಿ,ಮಗಳು ಸಾವು- ಬೆಸ್ಸಾಂ ಅಧಿಕಾರಿಗಳ ಅಮಾನತು…

90
firstsuddi

ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಮಗಳು ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಸಾಂ ಎಇ, ಎಇಇಯನ್ನು ಅಮಾನತುಗೊಳಿಸಿದ್ದೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಹೇಳಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಕೆ.ಜೆ.ಜಾರ್ಜ್ ಅವರು, ಈ ದುರ್ಘಟನೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ನೀಡಲಿದೆ ಎಂದು ತಿಳಿಸಿದ್ದಾರೆ.

ನಿನ್ನೆ ನಗರದ ವೈಟ್​ಫೀಲ್ಡ್​​​ನ ಕಾಡುಗೋಡಿಯಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ತಾಯಿ ಸೌಂದರ್ಯ ಹಾಗೂ ಮಗಳು ಲಿಯಾ ಸಾವನ್ನಪ್ಪಿದ ದುರ್ದೈವಿಗಳು. ತಮಿಳುನಾಡು ಮೂಲದ ಇವರು ಕಾಡುಗೋಡಿಯ ಗೋಪಾಲ್ ಕಾಲೋನಿಯಲ್ಲಿ ವಾಸವಾಗಿದ್ದರು. ನಿನ್ನೆ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ತುಳಿದ ಕಾರಣ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ.

ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ತಾಯಿ ಹಾಗೂ ಮಗಳು, ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ಬಸ್ ಇಳಿದು ನಡೆದುಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ಕರೆಂಟ್ ವೈರ್ ಕಾಣದೇ ತುಳಿದಿದ್ದಾರೆ. ಕ್ಷಣಾರ್ಧದಲ್ಲಿ ವಿದ್ಯುತ್ ಪ್ರವಹಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸೌಂದರ್ಯ ಅವರ ಪತಿ ವಿದ್ಯುತ್ ಸ್ಪರ್ಶದಿಂದ ಪಾರಾಗಿದ್ದಾರೆ. ಆದರೆ ಪತಿ ಎದುರೇ ಪತ್ನಿ ಹಾಗೂ ಕಂದಮ್ಮ ವಿದ್ಯುತ್ ಶಾಕ್‌ಗೆ ಸುಟ್ಟು ಕರಕಲಾಗಿದ್ದಾರೆ.