ಬೆಂಗಳೂರು : ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಕಂಠಪೂರ್ತಿ ಕುಡಿದು ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್ ಮಿಶ್ರಾನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಇಂದು ಬಂಧಿಸಿದ್ದಾರೆ.
ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಿದ್ದ ಶಂಕರ್ ಮಿಶ್ರಾ ತಲೆ ಮರೆಸಿಕೊಂಡಿದ್ದ. ಆತನಿಗಾಗಿ ಬೆಂಗಳೂರು, ಮುಂಬೈನಲ್ಲಿ ಶೋಧ ಕಾರ್ಯ ನಡೆದಿತ್ತು. ಲುಕೌಟ್ ನೋಟಿಸ್ ಕೂಡ ಜಾರಿಯಾಗಿತ್ತು. ಇದೀಗ ಬೆಂಗಳೂರಿನ ಸಂಜಯ್ ನಗರ ಗೆಸ್ಟ್ ಹೌಸ್‍ನಲ್ಲಿ ತಲೆಮರೆಸಿಕೊಂಡಿದ್ದ ಶಂಕರ್ ಮಿಶ್ರಾನ ಬಂಧವಾಗಿದೆ.
ನವೆಂಬರ್ 26ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ, ಶಂಕರ್ ಮಿಶ್ರಾ ಅವರು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸ್ ತನಿಖೆ ವೇಳೆ ಸಂತ್ರಸ್ತೆ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದರು. ಮೂತ್ರ ವಿಸರ್ಜನೆ ಮಾಡಿದ ನಂತರ ಅವನು ಅಳಲು ಪ್ರಾರಂಭಿಸಿದ. ನನ್ನಲ್ಲಿ ಕೈಮುಗಿದು ಕ್ಷಮೆಯಾಚಿಸಿದ. ನಾನು ಒಂದು ಕ್ಷಣ ದಿಗ್ಭ್ರಮೆಗೊಂಡೆ. ಅಲ್ಲದೇ ಅವನು ನಾನು ಫ್ಯಾಮಿಲಿ ಮ್ಯಾನ್, ಘಟನೆಯಿಂದ ನನ್ನ ಹೆಂಡತಿ ಮಗುವಿಗೆ ತೊಂದರೆಯಾಗಬಾರದು ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ. ಆದ್ದರಿಂದ ಅವನ ವಿರುದ್ಧ ಆರೋಪ ಹೊರಿಸುವುದು ನನಗೆ ತುಂಬಾ ಕಷ್ಟಕರವೆನಿಸಿತ್ತು ಎಂದು ಹೇಳಿದ್ದಾರೆ.
ಈ ಮಧ್ಯೆ ಶಂಕರ್ ನನ್ನು ವೇಲ್ಸ್ ಫಾರ್ಗೋ ಕಂಪನಿ ವಜಾಗೊಳಿಸಿದೆ. ವೇಲ್ಸ್ ಫಾರ್ಗೋ ಉದ್ಯೋಗಿಗಳು ವೃತ್ತಿಪರ ಹಾಗೂ ವೈಯಕ್ತಿಕವಾಗಿ ಉತ್ತಮ ನಡವಳಿಕೆಯನ್ನು ಹೊಂದಿದ್ದಾರೆ, ಇವರ ಮೇಲಿನ ಆರೋಪಗಳು ಕಂಪನಿಗೆ ಕೆಟ್ಟ ಹೆಸರನ್ನು ತಂದಿದೆ ಹೀಗಾಗಿ ಅವರನ್ನು ಕೆಲಸದಿಂದ ವಜಾ ಮಾಡುತ್ತಿರುವುದಾಗಿ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.










