ನವದೆಹಲಿ : ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಸಹಪ್ರಯಾಣಿಕ ಮೂತ್ರ ವಿಸರ್ಜಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನ್ಯೂಯಾರ್ಕ್ ನಿಂದ ದೆಹಲಿಗೆ ನ.26 ರಂದು ಏರ್ ಇಂಡಿಯಾ ವಿಮಾನ AI-102 ಸಂಚರಿಸುತ್ತಿತ್ತು. ಈ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಸಂಚರಿಸುತ್ತಿದ್ದ ಪುರುಷ ಪ್ರಯಾಣಿಕರೊಬ್ಬರು ಕುಡಿದ ಮತ್ತಿನಲ್ಲಿ ಸಹಪ್ರಯಾಣಿಕರಾಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದಾರೆ.
ಘಟನೆ ಬಳಿಕ ಮಹಿಳೆ ಈ ಬಗ್ಗೆ ಟಾಟಾ ಸನ್ಸ್ ಗ್ರೂಪ್ ನ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ಅವರಿಗೆ ಪತ್ರ ಬರೆದು ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ರಕ್ಷಣೆಗೆ ವಿಮಾನದ ಸಿಬ್ಬಂದಿ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಇದರಿಂದಾಗಿ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಘಟನೆ ಬಗ್ಗೆ ಇದೀಗ ಮಾಹಿತಿ ಸಿಕ್ಕಿದೆ. ಪೊಲೀಸರಿಗೆ ಹಾಗೂ ನಿಯಂತ್ರಣ ಅಧಿಕಾರಿಗಳಿಗೆ ವರದಿ ನೀಡಿದ್ದೇವೆ. ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದೆ.










