ಶಂಕಿತ ರೇಬಿಸ್ ವೈರಸ್‍ಗೆ ಬಲಿಯಾದ ಪಿಯುಸಿ ವಿದ್ಯಾರ್ಥಿನಿ…

75
firstsuddi

ದಕ್ಷಿಣ ಕನ್ನಡ : ಶಂಕಿತ ರೇಬಿಸ್ ವೈರಸ್ ಗೆ ಪಿಯುಸಿ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಕಡಬ ತಾಲ್ಲೂಕಿನ ಆಲಂಕಾರಿನಲ್ಲಿ ನಡೆದಿದೆ. ವಿನ್ಸಿ ಸಾರಮ್ಮ (17) ಮೃತ ಬಾಲಕಿ. ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

ಗುರುವಾರ ಬೆಳಗ್ಗೆ ವಿನ್ಸಿಗೆ ಏಕಾಏಕಿ ತಲೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಪೋಷಕರು ಸ್ಥಳೀಯ ಆಸ್ಪತ್ರೆಯಲ್ಲಿ ಔಷಧ ಕೊಡಿಸಿದ್ದಾರೆ. ಆದರೆ, ಸಂಜೆ ವೇಳೆಗೆ ಮತ್ತೆ ತಲೆನೋವು ಉಲ್ಬಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

ಮೃತಳ ಮನೆಯ ನಾಯಿ ಕೆಲವು ತಿಂಗಳುಗಳ ಹಿಂದೆ ರೇಬೀಸ್ಗೆ ಒಳಗಾಗಿ ಸಾವನ್ನಪ್ಪಿತ್ತು. ಅದೇ ನಾಯಿಯಿಂದ ವೈರಸ್ ವಿದ್ಯಾರ್ಥಿನಿಗೂ ತಗಲಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ವಿನ್ಸಿ ಮೃತಪಟ್ಟಿದ್ದರ ಬಗ್ಗೆ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ವಿನ್ಸಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.