ಶಾಲಾ ಬಸ್ ಪಲ್ಟಿ– 6 ಮಕ್ಕಳ ದಾರುಣ ಸಾವು, 20ಕ್ಕೂ ಹೆಚ್ಚು ಮಕ್ಕಳಿಗೆ ಗಾಯ…

38
firstsuddi

ಚಂಡೀಗಢ: ಶಾಲಾ ಬಸ್ ಪಲ್ಟಿಯಾಗಿ 6 ಮಕ್ಕಳು ದಾರುಣ ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಹರಿಯಾಣದ ನರ್ನಾಲ್‌ನಲ್ಲಿ ನಡೆದಿದೆ.

ಜಿ.ಎಲ್ ಪಬ್ಲಿಕ್ ಸ್ಕೂಲ್‌ಗೆ ಸೇರಿದ ಬಸ್ ಕನಿನಾದ ಉನ್ಹಾನಿ ಗ್ರಾಮದ ಬಳಿ ಶಾಲಾ ಬಸ್ ಪಲ್ಟಿಯಾಗಿದೆ. ಈದ್ ಉಲ್ ಫ್ರಿತ್ (ರಂಜಾನ್) ಹೊರತಾಗಿಯೂ ಶಾಲೆಯು ರಜೆ ಘೋಷಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಾನೆ ಎಂದು ಶಂಕಿಸಿದ್ದಾರೆ.

ಸ್ಥಳೀಯರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್ ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.