ಶಾಲೆ ನಿಯಮಕ್ಕೆ ಒಪ್ಪದಿದ್ದರೆ ಬೇರೆ ದಾರಿ ನೋಡಿಕೊಳ್ಳಲಿ – ನಳಿನ್ ಕುಮಾರ್ ಕಟೀಲ್.

62
firstsuddi

ಮಂಗಳೂರು : ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದು, ಹಿಜಾಬ್ ಅಥವಾ ಇಂತಹ ಯಾವುದೇ ಘಟನೆಗಳಿಗೆ ಆಸ್ಪದವಿಲ್ಲ. ಶಾಲೆ ಸರಸ್ವತಿಯ ದೇಗುಲ. ಶಾಲೆ ನಿಯಮದ ಜೊತೆಗೆ ಕಲಿಯುವುದು ವಿದ್ಯಾರ್ಥಿಗಳ ಧರ್ಮ. ಅದರೊಟ್ಟಿಗೆ ಧರ್ಮ ಬೆರೆಸುವುದು ಸರಿಯಲ್ಲ. ಶಾಲೆಯ ನಿಯಮಕ್ಕೆ ಒಪ್ಪದಿದ್ದರೆ ಅಂತಹವರು ಬೇರೆ ದಾರಿ ನೋಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ. ಟಿಪ್ಪು ಜಯಂತಿ, ಶಾದಿಭಾಗ್ಯದಂತಹ ಯೋಜನೆಗಳ ರೂವಾರಿ ಸಿದ್ದರಾಮಯ್ಯ, ಹಿಜಾಬ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಕಾಲದಲ್ಲಿ ಸಾಮರಸ್ಯ ಕದಡುವ ಎಷ್ಟು ಘಟನೆಗಳು ನಡೆದಿವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಹಿಜಾಬ್ ವಿವಾದ ವ್ಯವಸ್ಥಿತ ಷಡ್ಯಂತ್ರ. ಮನೆಯಿಂದ ಶಾಲೆ-ಕಾಲೇಜು ಕಾಂಪೌಂಡ್ ವರೆಗೆ ಹಿಜಾಬ್ ಧರಿಸಿಯೇ ಬರಲಿ. ಆದರೆ ತರಗತಿಯಲ್ಲಿ ಹಿಜಾಬ್ ತೆಗೆದು ಸಮವಸ್ತ್ರದಲ್ಲಿಯೇ ಹಾಜರಾಗಬೇಕು ಎಂದರು.

ಹಿಜಾಬ್ ವ್ಯಕ್ತಿಯ ಸ್ವಾತಂತ್ರ್ಯ ಎಂದು ಸಿದ್ದರಾಮಯ್ಯ ಸೇರಿ ಹಲವರು ಹೇಳುತ್ತಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು, ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಒದಗಿಸಲಿ. ತ್ರಿವಳಿ ತಲಾಕ್ ರದ್ದು ಮಾಡುವ ಮೂಲಕ ಭದ್ರತೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಮುಸ್ಲಿಂ ಮಹಿಳೆಯರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಎಸ್ ಡಿಪಿಐ, ಸಿದ್ದರಾಮಯ್ಯ, ಖಾದರ್ ಅವರ ಮಾತು ಕೇಳಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದರು.