ಶಾಲೆಗಳಿಗೆ ಬಿಡುವು ಕೊಟ್ಟರೆ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತದೆ : ಬಸವರಾಜ ಹೊರಟ್ಟಿ.

59
firstsuddi

ಬೆಂಗಳೂರು : ಈಗಿನ ಕೊರೊನಾ ವೈರಸ್ ಬಹಳ ಗಂಭೀರವಾಗಿಲ್ಲ. ಸರ್ಕಾರ ಶಾಲೆಗಳಿಗೆ ಬಿಡುವು ಕೊಡುವುದು ಬೇಡ. ಬಿಡುವು ಕೊಟ್ಟರೆ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಲಹೆ ನೀಡಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ರೀತಿ ಶಾಲೆಗೆ ರಜೆ ಕೊಟ್ಟರೆ ಮುಂದೆ ಕಷ್ಟವಾಗುತ್ತದೆ. ಮಕ್ಕಳು ಮತ್ತಷ್ಟು ಹಾಳಾಗುತ್ತಾರೆ. 1 ರಿಂದ 5ರವರೆಗೆ ಶಾಲೆ ಬಂದ್ ಮಾಡಿ. 6 ರಿಂದ ಕಾಲೇಜು ಹಂತದ ಎಲ್ಲಾ ತರಗತಿಗಳನ್ನು ನಡೆಸಿ. ಅಂತರವನ್ನು ಕಾಪಾಡಿಕೊಂಡು ಶಾಲೆ ನಡೆಸಿ. ನಿಯಮ ಪಾಲಿಸಿ ಮಕ್ಕಳಿಗೆ ಪಾಠ ಮಾಡುವುದು ಉತ್ತಮ ಎಂದರು.

ಆನ್ ಲೈನ್ ಶಿಕ್ಷಣವೂ ಸರಿಯಲ್ಲ. ಆನ್ ಲೈನ್ ಶಿಕ್ಷಣ ಸಿಟಿಗೆ ಮಾತ್ರ ಅನ್ವಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಗಲ್ಲ. ನೆಟ್ ವರ್ಕ್ ಇರಲ್ಲ, ಕರೆಂಟ್ ಇರಲ್ಲ, ಮೊಬೈಲ್ ಇರಲ್ಲ. ಅಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟವಾಗುತ್ತದೆ. ಶ್ರೀಮಂತರ ಮಕ್ಕಳು ಕಲಿಯುತ್ತಾರೆ. ಬಡ ಮಕ್ಕಳು ಶಿಕ್ಷಣದಿಂದ ಹಿಂದೆ ಬೀಳ್ತಾರೆ ಎಂದರು.

ಜಿಲ್ಲಾಧಿಕಾರಿಗಳಿಗೆ ಶಾಲೆ ಅಧಿಕಾರ ಕೊಟ್ಟರೆ ಸರಿಯಲ್ಲ. ಒಂದೊಂದು ಜಿಲ್ಲೆಗೆ ಒಂದು ರೀತಿ ಬೇಡ. ತೆಗೆದುಕೊಂಡರೆ ಒಂದೇ ತೀರ್ಮಾನ ಇರಬೇಕು. ವಿದ್ಯಾಗಮನಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಗುಡಿಯಲ್ಲಿ, ಮರದ ಕೆಳಗೆ ಶಿಕ್ಷಣ ನೀಡುವುದು ಸರಿಯಲ್ಲ ಎಂದರು.