ಶಿಕ್ಷಕರು ಬೋಧಕ ವೃತ್ತಿಯನ್ನು ಅರ್ಪಣಾ ಮನೋಭಾವದಿಂದ ಮಾಡಿದರೆ ಮಾತ್ರ ಯಶಸ್ವಿಯಾಗುತ್ತಾರೆ: ಟಿ.ಡಿ.ರಾಜೇಗೌಡ.

62
firstsuddi

ಚಿಕ್ಕಮಗಳೂರು: ಬೋಧಕ ವೃತ್ತಿ ಅತ್ಯಂತ ಪವಿತ್ರವಾದ ಕಾಯಕ, ಅದನ್ನು ಅರ್ಪಣಾ ಮನೋಭಾವದಿಂದ ಮಾಡಿದರೆ ಮಾತ್ರ ಶಿಕ್ಷಕರು ವೃತ್ತಿಯಲ್ಲಿ ಯಶಸ್ವಿಯಾಗುತ್ತಾರೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಸೇವೆಯಿಂದ ನಿವೃತ್ತರಾದ ವಾಣಿಜ್ಯ ವಿಭಾಗದ ಮುಖ್ಯಸ್ಥ ಕೆ.ಎನ್.ಮಂಜುನಾಥ ಭಟ್ ಅವರ ಬೀಳ್ಕೊಡುಗೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಈ ದೇಶದ ಭದ್ರ ಬುನಾದಿಗಳು ಅವರು ಕೇವಲ ಸಂಬಳಕ್ಕಾಗಿ ಕೆಲಸ ಮಾಡಿದರೆ, ಯಾವುದೇ ಉಪಯೋಗವಾಗುವುದಿಲ್ಲ ಅದರ ಬದಲಿಗೆ ಅರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಬಾಳು ಬೆಳಗುವುದರ ಜೊತೆಗೆ ರಾಷ್ಟ್ರದ ಭವಿಷ್ಯವೂ ಉಜ್ವಲವಾಗುತ್ತದೆ ಎಂದರು.

ವಯೋನಿವೃತ್ತಿ ಹೊಂದುತ್ತಿರುವ ಮಂಜುನಾಥ ಭಟ್ ಅವರ ಕಾರ್ಯವೈಖರಿ ಇತರ ಶಿಕ್ಷಕರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೇಶವಮೂರ್ತಿ, ಮಂಜುನಾಥ ಭಟ್ ಅವರಂತಹ ಬೋಧಕ ವೃಂದದಿಂದಾಗಿ ಕಾಲೇಜು ಬೆಳೆಯುವುದರ ಜೊತೆಗೆ ಅದರ ಕೀರ್ತಿಯೂ ಹೆಚ್ಚಿದೆ ಎಂದು ಹೇಳಿದರು.

ಕೆ.ಎನ್. ಮಂಜುನಾಥ ಭಟ್ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವತಿಯಿಂದ ಸಮಾರಂಭದಲ್ಲಿ ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ ಭಟ್ ಕಳೆದ 35 ವರ್ಷಗಳ ಸೇವೆ ತಮಗೆ ಅತ್ಯಂತ ತೃಪ್ತಿ, ಸಾರ್ಥಕತೆ ಮತ್ತು ಹೆಮ್ಮೆ ತಂದಿದೆ ಎಂದರು. ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಮಲೆನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ರಾಧಾ ಸುಂದರೇಶ್, ಖಜಾಂಚಿ ಡಿ.ಎಚ್.ನಟರಾಜ್, ಸಹ ಕಾರ್ಯದರ್ಶಿ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.