ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಮ್ಮ ಆಸ್ತಿ: 2ನೇ ಹಾಗೂ 3ನೇ ಹಂತದ ನಗರಗಳತ್ತ ಮುಖ ಮಾಡಿ; ಉದ್ಯಮಿಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸಲಹೆ.

32

ಬೆಂಗಳೂರು: ಬೆಂಗಳೂರು ಹೊರತಾಗಿ ರಾಜ್ಯದ ಎರಡನೇ ಹಾಗೂ ಮೂರನೇ ಹಂತದ ನಗರಗಳತ್ತ ಮುಖ ಮಾಡಿ. ನಮ್ಮ ಸರ್ಕಾರ ನಿಮಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅವರು ಸಲಹೆ ನೀಡಿದರು. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಚಿವರಾದ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ನೂತನ ಕೈಗಾರಿಕಾ ನೀತಿ ರೂಪಿಸಿದ್ದಾರೆ. ಆ ಮೂಲಕ ಅನೇಕ ಕಾರ್ಯಕ್ರಮ ನಿಮಗಾಗಿ ರೂಪಿಸಲಾಗಿದೆ. ನೀವು ಬೆಂಗಳೂರಿನ ಬಗ್ಗೆ ಹೆಚ್ಚು ಗಮನಹರಿಸಬೇಡಿ. ಬೆಂಗಳೂರು ಹೊರತಾಗಿ 2ನೇ ಹಾಗೂ 3ನೇ ಹಂತದ ನಗರಗಳತ್ತ ಗಮನಹರಿಸಬೇಕು. ನಂಜುಂಡಪ್ಪ ಅವರ ವರದಿ ಆಧಾರದ ಮೇಲೆ ಹಿಂದುಳಿದ ತಾಲೂಕುಗಳನ್ನು ಗುರುತಿಸಲಾಗಿದ್ದು, ಅಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅನೇಕ ಪ್ರೋತ್ಸಾಹ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ ತಾಲೂಕು ಮಟ್ಟದಲ್ಲಿ ಕೈಗಾರಿಕಾ ಪ್ರದೇಶ ರೂಪಿಸುವ ಉದ್ದೇಶವಿದ್ದು, ಎಲ್ಲೆಡೆ ನೀರು ಹಾಗೂ ವಿದ್ಯುತ್ ಸೌಲಭ್ಯ ನೀಡಲಾಗುವುದು. ಈ ಹೊಸ ನೀತಿಯಲ್ಲಿ ದೊಡ್ಡ ಉದ್ಯಮಗಿಳಿಗಿಂತ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ನೆರವಿನ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಇಲ್ಲಿರುವ ಎಲ್ಲಾ ಉದ್ಯಮಿಗಳು ನಮ್ಮ ರಾಜ್ಯದ ಆಸ್ತಿ. ನೀವು ಬಲಿಷ್ವಾದಷ್ಟು ನಾವು ಬಲಿಷ್ಠವಾಗಿರುತ್ತದೆ. ನೀವು ದುರ್ಬಲವಾದರೆ ನಾವು ದುರ್ಬಲವಾಗುತ್ತೇವೆ ಎಂದು ನಮ್ಮ ಸರ್ಕಾರ ನಂಬಿದೆ. ನಮ್ಮ ರಾಜ್ಯದ ಏಳು ಕೋಟಿ ಜನಸಂಖ್ಯೆಯಲ್ಲಿ ಸುಮಾರು 1 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಿರುವುದು ನಮ್ಮ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು. ನೀವೆಲ್ಲರೂ ಸರ್ಕಾರಕ್ಕೆ ನೆರವಾಗುತ್ತಿದ್ದೀರಿ ಎಂದು ತಿಳಿಸಿದರು.