ಸತತ ಮಳೆಯಿಂದಾಗಿ ಬೆಳೆ ನಷ್ಟ – ಕಾಫಿ ಬೆಳೆಗಾರರಿಗೆ ಪರಿಹಾರ ಒದಗಿಸುವಂತೆ ಮನವಿ…

74
firstsuddi

ಚಿಕ್ಕಮಗಳೂರು : ಸತತ ಮಳೆಯಿಂದ ಬೆಳೆ ನಷ್ಟ ಅನುಭವಿಸಿರುವ ಕಾಫಿ ಬೆಳೆಗಾರರಿಗೆ ಪರಿಹಾರ ಒದಗಿಸಿ ಕೊಡುವಂತೆ ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ಆವತಿ ಹೋಬಳಿ ವ್ಯಾಪ್ತಿಯಲ್ಲಿ ಈ ಬಾರೀ ಹಿಂದೆಂದೂ ಕಾಣದಷ್ಟು ದಾಖಲೆ ಪ್ರಮಾಣದ ಮಳೆಯಾಗಿದೆ. ಈಗಾಗಲೇ 130ಕ್ಕೂ ಹೆಚ್ಚು ಇಂಚು ಮಳೆ ಸುರಿದಿದೆ ಎಂದರು.

ಅಧಿಕ ಮಳೆಯಿಂದಾಗಿ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗಳು ನೆಲಕಚ್ಚಿದ್ದು ಸಾಲಸೋಲ ಮಾಡಿ ಬೆಳೆ ಬೆಳೆದ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಅತಿಯಾದ ಮಳೆಯಿಂದಾಗಿ ಕಾಫಿ, ಕಾಳು ಮೆಣಸಿನ ಬಳ್ಳಿಗಳು ರೋಗಕ್ಕೆ ತುತ್ತಾಗಿ ನಾಶವಾಗುತ್ತಿವೆ. ಕಳೆದ ನಾಲ್ಕು ವರ್ಷದಿಂದ ಸುರಿಯುತ್ತಿರುವ ಅತಿವೃಷ್ಟಿಯಿಂದಾಗಿ ಕಾಫಿ ಬೆಳೆಗಾರರು ಜರ್ಝರಿತರಾಗಿದ್ದಾರೆ ಎಂದರು.

ವಾರ್ಷಿಕ ಬೆಳೆಯನ್ನೇ ನಂಬಿ ಬದುಕುತ್ತಿರುವ ಬೆಳೆಗಾರರು ಸತತ ಬೆಳೆ ನಷ್ಟದಿಂದಾಗಿ ಕುಟುಂಬ ನಿರ್ವಹಣೆ ಮಾಡಲಾಗದೆ ಕಂಗಾಲಾಗಿದ್ದಾರೆ ಎಂದ ಅವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಆಗ್ರಹಿಸಿದರು.

ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೆಪ್ಟಂಬರ್ 8ರಂದು ಕೇಂದ್ರದ ತಂಡ ಜಿಲ್ಲೆಗೆ ಆಗಮಿಸುತ್ತಿದ್ದು ಬೆಳೆ ನಷ್ಟದ ಸಮೀಕ್ಷೆ ನಡೆಸಲಿದೆ ಎಂದು ಹೇಳಿದರು. ಈ ವೇಳೆ ಆವತಿ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಚ್.ಎನ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್, ಉಪಾಧ್ಯಕ್ಷ ಎ.ಯು.ನಾರಾಯಣಗೌಡ, ಕೆಜಿಎಫ್ ಉಪಾಧ್ಯಕ್ಷ ಎ.ಕೆ.ವಸಂತೇಗೌಡ, ಎಚ್.ಆರ್.ಪ್ರಭಾಕರ್ ಹಾಜರಿದ್ದರು.