ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ಸಿಡಿದೆದ್ದ ಕೇಸರಿಪಡೆ : ಸುನಿಲ್ ಕುಮಾರ್‌ರಿಂದ ಸ್ವಾಭಿಮಾನಿ ಹಿಂದೂ ಅಭಿಯಾನ ಆರಂಭ…

65
firstsuddi

ಬೆಂಗಳೂರು : ಸತೀಶ್ ಜಾರಕಿಹೊಳಿ ಹೇಳಿಕೆ ವಿರುದ್ಧ ಕೇಸರಿಪಡೆ ಕೆರಳಿದ್ದು, ಸಚಿವ ಸುನೀಲ್ ಕುಮಾರ್ ‘ಸ್ವಾಭಿಮಾನಿ ಹಿಂದು’ ಅಭಿಯಾನ ಆರಂಭಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವರು, ನನ್ನನ್ನು ಹಿಂದು ಎಂದು ಕರೆಯಬೇಡಿ ಎಂದು ಹೇಳಿದ್ದ ಜವಾಹರ್ ಲಾಲ್ ನೆಹರು ಅವರ ಹಾದಿಯಲ್ಲೇ ಕಾಂಗ್ರೆಸ್ ಇಷ್ಟು ವರ್ಷ ನಡೆದುಕೊಂಡಿದೆ. ಹಿಂದು, ಹಿಂದುತ್ವ ಹಾಗೂ ಹಿಂದು ರಾಷ್ಟ್ರೀಯ ವಿಚಾರಧಾರೆಯನ್ನು ಅವಕಾಶ ಸಿಕ್ಕಾಗಲೆಲ್ಲ ಹತ್ತಿಕ್ಕಲು ಕಾಂಗ್ರೆಸ್ ಯತ್ನಿಸುತ್ತಲೆ ಬಂದಿದೆ. ಸತೀಶ್ ಜಾರಕಿಹೊಳಿ ಈ ಪರಂಪರೆಯ ಭಾಗ ಎಂದು ಆಕ್ರೋಶ ಹೊರಹಾಕಿದರು.

ಸತೀಶ್ ಜಾರಕಿಹೊಳಿಗೆ ಹಿಂದು ಶಬ್ದ ಅಶ್ಲೀಲ, ಸಿದ್ದರಾಮಯ್ಯ ಅವರಿಗೆ ಕೇಸರಿ-ತಿಲಕ ಕಂಡರೆ ಭಯ, ದೈವಾರಾಧನೆ ಹಾಗೂ ತೀರ್ಥ ಬಿ.ಟಿ.ಲಲಿತಾನಾಯಕರಿಗೆ ವಾಕರಿ ತರಿಸುತ್ತದೆ, ಡಿ.ಕೆ.ಶಿವಕುಮಾರ್ ಗೆ ಮುಸ್ಲಿಂರು ಸೋದರರು, ಎಂ.ಬಿ.ಪಾಟೀಲರಿಗೆ ಹಿಂದು ಧರ್ಮದ ಅಖಂಡತೆ ಒಡೆಯುವ ಯೋಚನೆ, ಕೇಂದ್ರದ ಮಾಜಿ ಸಚಿವ ಶಿವರಾಜ್ ಪಾಟೀಲ್ ಗೆ ಭಗವದ್ಗೀತೆ ಜಿಹಾದ್ ಆಗಿ ಕಾಣುತ್ತದೆ. ಇವೆಲ್ಲವೂ ಕಾಂಗ್ರೆಸ್ ಒಳಮನಸಿನಲ್ಲಿರುವ ಹಿಂದು ವಿರೋಧಿ ಭಾವಗಳು.

ಹಿಂದುತ್ವ ಎಂಬ ಜೀವನ ಪದ್ಧತಿಯನ್ನೇ ಟೀಕಿಸಿದ ಸತೀಶ್ ಜಾರಕಿಹೊಳಿ ಪರವಾಗಿ ಕಾಂಗ್ರೆಸ್ ಇಡಿ ರಾಷ್ಟ್ರದ ಕ್ಷಮೆ ಯಾಚಿಸಬೇಕು. ಇದು ವೈಯಕ್ತಿಕ ಅಭಿಪ್ರಾಯ ಎಂದು ಕೈ ತೊಳೆದುಕೊಳ್ಳುವ ನಾಟಕ ಬೇಡ ಮಾನ್ಯ ಸುರ್ಜೇವಾಲಾ ಅವರೇ, ಭಾರತೀಯತೆಗೆ ಅಪಮಾನ ಮಾಡುವ ನಿಮ್ಮ ನಾಟಕಕ್ಕೆ ಕ್ಷಮೆ ಇಲ್ಲ.

ನಾನು ಸ್ವಾಭಿಮಾನಿ ಹಿಂದು….
ಹಿಂದುತ್ವದ ಅವಹೇಳನವಾದಾಗ ನಾನು ಪ್ರತಿರೋಧಿಸುತ್ತೇನೆ.
ರಾಷ್ಟ್ರೀಯತೆಗೆ ಧಕ್ಕೆಯಾದಾಗ ನಾನು ಸೆಟೆದು ನಿಲ್ಲುತ್ತೇನೆ. ಭಾರತೀಯ ಪರಂಪರೆಯ ನಿಂದನೆಯಾದಾಗ ನಾನು ಹೋರಾಡುತ್ತೇನೆ. ಸ್ವಧರ್ಮ, ಸ್ವದೇಶ, ಸ್ವಭಾಷೆ ನನ್ನ ಅಸ್ಮಿತೆ..

ನಾನು ಸ್ವಾಭಿಮಾನಿ ಹಿಂದು…..
ನನ್ನೊಡಲೊಳಗೆ ದೇಶಭಕ್ತಿಯ ಕೆಚ್ಚಿದೆ. ನನ್ನ ಹೃದಯದಲ್ಲಿ ಹಿಂದು ರಾಷ್ಟ್ರ ಪ್ರೀತಿ ಇದೆ. ನನ್ನ ಮನಸಿನಲ್ಲಿ ಹಿಂದುತ್ವದ ಸಂಸ್ಕಾರವಿದೆ.
ನನ್ನ ಉಸಿರಿನಲ್ಲಿ ರಾಷ್ಟ್ರ ವಿರೋಧಿಗಳ ವಿರುದ್ಧ ದ್ವೇಷವಿದೆ. ನನ್ನ ರಕ್ತದಲ್ಲಿ ಶಿವಾಜಿಯ ಸ್ವಾಭಿಮಾನವಿದೆ. ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ.. ಎಂದು ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.