ಸತ್ತು ಹೋಗಿದ್ದೇನೆ ಎಂದು ನಂಬಿಸಿ 2 ವರ್ಷದಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಕೊಲೆ ಆರೋಪಿ ಅರೆಸ್ಟ್…

57
firstsuddi

ಬೆಂಗಳೂರು: ಸತ್ತು ಹೋಗಿದ್ದೇನೆ ಎಂದು ಎಲ್ಲರನ್ನೂ ನಂಬಿಸಿ ಎರಡು ವರ್ಷಗಳಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದ ವೈಟ್ ಫೀಲ್ಡ್ ಪೊಲೀಸ್ ಠಾಣೆ ರೌಡಿ ಶೀಟರ್ ಆಗಿರುವ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ ಆರೋಪಿ. ಈತ ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಾಡುಬಿಸನಹಳ್ಳಿ ಸೋಮನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲ್ಲಿಕಾರ್ಜುನ, ಬಳಿಕ ರಾಜಾನುಕುಂಟೆಯಲ್ಲಿ ಒಂದು ಕೊಲೆ ಕೇಸ್ ನಲ್ಲಿ ಅರೋಪಿಯಾಗಿದ್ದ.

ಪೊಲೀಸರಿಗೆ ಸಿಗದೆ ಎರಡು ವರ್ಷಗಳಿಂದ ಈತ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಮನೆ ಬಳಿ ಪೊಲೀಸರು ವಿಚಾರಿಸಿದಾಗ ಅವನು ಸತ್ತು ಹೋಗಿದ್ದಾನೆ ಎಂದು ಕುಟುಂಬದವರು ಹೇಳಿದ್ದರು. ಆದರೆ ಸಿಸಿಬಿಗೆ ಅವನು ಸತ್ತಿರುವ ವಿಚಾರದ ಬಗ್ಗೆ ಅನುಮಾನವಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಸತ್ತಿದ್ದಾನೆಂದು ಹೇಳಲಾದ ಆರೋಪಿ ಮಲ್ಲಿಕಾರ್ಜುನ ಪತ್ತೆಗೆ ವಿಚಾರಣೆಗೆ ಮುಂದಾಗಿತ್ತು.

ಇನ್ನು ಸಿಸಿಬಿ ಪೊಲೀಸರು ಮಲ್ಲಿಯ ಗೆಳೆಯರು, ಪರಿಚಿತರನ್ನು ವಿಚಾರಿಸಿದರೂ ಸತ್ತಿದ್ದಾನೆ ಎಂದು ಮಾಹಿತಿ ದೊರೆತಿತ್ತು. ಸತ್ತಿದ್ದಾನೆ ಅನ್ನುವುದಕ್ಕೆ ಬೇಕಾದ ದಾಖಲೆಗಳನ್ನು ಸಹ ಕುಟುಂಬ ರೆಡಿ ಮಾಡಿತ್ತು. ಆದರೂ ಸಹ ಅನುಮಾನ ಬಂದು ಸಿಸಿಬಿ ಪೊಲೀಸರು ಆರೋಪಿ ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕತೊಡಗಿದರು.

ಕೊನೆಗೆ ಆರೋಪಿ ಮಲ್ಲಿ ಸತ್ತಿಲ್ಲ. ಅರೆಸ್ಟ್‌ನಿಂದ ಬಚಾವ್ ಆಗಲು ಸತ್ತಿದ್ದಾನೆ ಎಂದು ಬಿಂಬಿಸಿ ತಲೆಮರೆಸಿಕೊಂಡು ಊರೂರು ಓಡಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.