ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಬಳಸಿಕೊಳ್ಳುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು : ಮಂಜುನಾಥ ಸ್ವಾಮಿ.

88
firstsuddi

ಚಿಕ್ಕಮಗಳೂರು : ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮೀಣ ಜನರು ವಿಶೇಷವಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಡಕ್ ಜಂಟಿ ನಿರ್ದೇಶಕ ಎಂ.ಮಂಜುನಾಥ ಸ್ವಾಮಿ ಸಲಹೆ ನೀಡಿದರು.

ತರೀಕೆರೆ ತಾಲ್ಲೂಕಿನ ಉಡೇವಾ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ನಿನ್ನೆ ಹರ್ಷ ಜೈ ಟೈಲರಿಂಗ್ ಮತ್ತು ಟ್ರೈನಿಂಗ್ ಸೆಂಟರ್ ಹಾಗೂ ಹರ್ಷ ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ್ನು ಉದ್ಘಾಟಿಸಿ ಅವರು ಮಾತನಾಡಿದರು

ಗ್ರಾಮೀಣ ಜನ ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರಗಳು ಕೋಟ್ಯಾಂತರ ರೂ. ವ್ಯಯಿಸಿ ಅನೇಕ ಸವಲತ್ತುಗಳನ್ನು ನೀಡುತ್ತಿವೆ. ಸಂಘ ಸಂಸ್ಥೆಗಳೂ ಸಹ ಸೌಕ ರ್ಯಗಳನ್ನು ಒದಗಿಸುತ್ತಿವೆ ಎಂದರು.

ಗ್ರಾಮೀಣರು ಮತ್ತು ವಿಶೇಷವಾಗಿ ಮಹಿಳೆಯರು ಈ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹರ್ಷ ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಸ್ಥಾಪಕ ಅಧ್ಯಕ್ಷ ಕೆ. ಎನ್.ಬಸವರಾಜ್, ಪಿಎಂಇಜಿಪಿ ಯೋಜನೆಯನ್ನು ಮತ್ತು ಅದರಿಂದ ದೊರೆಯುವ ಸೌಲಭ್ಯಗಳನ್ನು ಮಹಿಳೆಯರಿಗೆ ವಿವರಿಸಿದರು.

ಇದೇ ವೇಳೆ ವಾಲ್ಮೀಕಿ ಸಮುದಾಯದ ಮಹಿಳೆಯರಿಗೆ ಸ್ವಯಂ ಉದ್ಯೋಗ ಯೋಜನೆ ಅರಿವು ಕಾರ್ಯಾಗಾರ ನಡೆಯಿತು. ಮಾಜಿ ಯೋಧ ಸಿ.ಎಂ.ವೇಣು ಅವರನ್ನು ಸನ್ಮಾನಿ ಸಲಾಯಿತು.

ಮಹಿಳಾ ಜನನಿ ಟ್ರಸ್ಟ್ ಅಧ್ಯಕ್ಷೆ ಭಾನುಮತಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಿದ್ದಮ್ಮ, ವಾಲ್ಮೀಕಿ ಯುವ ಮೋರ್ಚಾ ಅಧ್ಯಕ್ಷ ಜಗದೀಶ್, ಟ್ರಸ್ಟ್ ಅಧ್ಯಕ್ಷೆ ಲೋಲಾಕ್ಷಿ, ತಾಲೂಕು ಹೊಲಿಗೆ ತರಬೇತಿ ಕೇಂದ್ರದ ಅಧಿಕಾರಿ ಸಂತೋಷ್, ವೀರಭದ್ರಾಚಾರ್ ಮಂಜುನಾಥ್ ಉಪಸ್ಥಿತರಿದ್ದರು.