ಸಲಾಂ ಆರತಿ ಹೆಸರು ಬದಲಾವಣೆ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ : ಶಶಿಕಲಾ ಜೊಲ್ಲೆ.

65
firstsuddi

ನವದೆಹಲಿ : ಸಲಾಂ ಆರತಿ ಹೆಸರು ಬದಲಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಸಲಾಂ ಆರತಿ ಎಂಬ ಹೆಸರನ್ನು ಬದಲಾವಣೆ ಮಾಡಬೇಕೆಂದು ಧಾರ್ಮಿಕ ಪರಿಷತ್ ಮನವಿ ಮಾಡಿದೆ. ‘ಸಲಾಂ’ ಜಾಗದಲ್ಲಿ ಬೇರೊಂದು ಸಂಸ್ಕೃತದ ಹೆಸರು ಇರಿಸಬೇಕೆಂಬ ಧಾರ್ಮಿಕ ಪರಿಷತ್ ಮನವಿಗೆ ಸ್ಪಂದಿಸಿದ್ದೇವೆ. ಆದರೂ ಅಧಿಕಾರಿಗಳು, ಇತಿಹಾಸಕಾರರ ಜೊತೆ ಚರ್ಚೆ ಮಾಡಬೇಕು. ಬಳಿಕ ಸಿಎಂ ಬೊಮ್ಮಾಯಿ ಜೊತೆಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಪ್ರಕ್ರಿಯೆಗೆ ಸುಮಾರು 10-15 ದಿನಗಳು ಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಸಲಾಂ ಆರತಿ’ ಬದಲು ‘ಆರತಿ ನಮಸ್ಕಾರ’. ‘ದೀವಟಿಗೆ ಸಲಾಂ’ ಬದಲಿಗೆ ‘ಮಂಗಳಾರತಿ ನಮಸ್ಕಾರ’ ಎಂದು ಹೆಸರು ಬದಲಾಯಿಸುವ ಬಗ್ಗೆ ಚಿಂತನೆ ನಡೆದಿದೆ. ಕಳೆದ ನವೆಂಬರ್ 2ರಂದು ನಡೆದಿದ್ದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಬಗ್ಗೆ ಚಿಂತನೆ ನಡೆದಿತ್ತು. ಹೆಸರು ಬದಲಾವಣೆ ಬಗ್ಗೆ ಶೀಘ್ರ ಧಾರ್ಮಿಕ ದತ್ತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು ಎಂದು ಹೇಳಿದರು.