ಸಾರ್ವಜನಿಕ ಆಸ್ತಿ ಹಾನಿ : 5.20 ಕೋಟಿ ರೂ. ನಷ್ಟ ಭರಿಸಲು ಪಿಎಫ್ಐಗೆ ಕೇರಳ ಹೈಕೋರ್ಟ್ ಸೂಚನೆ…

67
firstsuddi

ತಿರುವನಂತಪುರಂ : ಎನ್ಐಎ ದಾಳಿ ಖಂಡಿಸಿ ನಡೆಸಿದ ಪ್ರತಿಭಟನೆ ವೇಳೆ ಉಂಟಾದ ನಷ್ಟಕ್ಕಾಗಿ 5.20 ಕೋಟಿ ರೂ. ಪರಿಹಾರವನ್ನು ಭರಿಸಿಕೊಡುವಂತೆ ಪಿಎಫ್ಐ ಮತ್ತು ಅದರ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಕೇರಳ ಹೈಕೋರ್ಟ್ ಸೂಚಿಸಿದೆ.

ಸೆಪ್ಟೆಂಬರ್ 23 ರಂದು ಪಿಎಫ್ಐ ಸಂಘಟನೆ ಕೇರಳದಲ್ಲಿ ಎನ್ಐಎ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಸಾರ್ವಜನಿಕ ಆಸ್ತಿ, ಕೇರಳ ಸಾರಿಗೆಯ ಬಸ್‍ಗಳಿಗೆ(ಕೆಎಸ್ ಆರ್ ಟಿಸಿ)ಬಸ್ ಗಳ ಮೇಲೆ ಕಲ್ಲುತೂರಾಟ ನಡೆದಿತ್ತು. ಪ್ರತಿಭಟನಾಕಾರರಿಂದ 5.6 ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಪರಿಹಾರ ನೀಡಬೇಕು ಎಂದು ಕೇರಳ ಸಾರಿಗೆ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಪರಿಹಾರ ವಸೂಲಿ ಮಾಡುವಂತೆ ನ್ಯಾಯಾಲಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿತ್ತು.

ಇಂದು ನಡೆದ ವಿಚಾರಣೆ ವೇಳೆ ಜಸ್ಟಿಸ್ ಎಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಸಿಪಿ ಮುಹಮ್ಮದ್ ನಿಯಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಬೆಂಬಲಿಗರು ಮಾಡಿದ ಗಲಭೆಗೆ ಪಿಎಫ್ಐ ಪ್ರಧಾನ ಕಾರ್ಯದರ್ಶಿ ಸಂಪೂರ್ಣ ಜವಾಬ್ದಾರಿಯಾಗಿದ್ದು ಅವರೇ 5.20 ಕೋಟಿ ರೂ. ಹಣವನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಎರಡು ವಾರಗಳಲ್ಲಿ ನೀಡಬೇಕು ಎಂದು ಸೂಚನೆ ನೀಡಿದೆ. ಒಂದು ವೇಳೆ ಹಣದ ಮೊತ್ತ ಕಡಿಮೆಯಾದರೆ ಹೆಚ್ಚುವರಿ ಹಣವನ್ನೂ ಪಿಎಫ್ಐ ಪ್ರಧಾನ ಕಾರ್ಯದರ್ಶಿಯೇ ನೀಡಬೇಕು ಎಂದು ಇದೇ ವೇಳೆ ಕೋರ್ಟ್ ಹೇಳಿದೆ.