ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಐವರು ಆತ್ಮಹತ್ಯೆ…

112
firstsuddi

ತುಮಕೂರು: ಸಾಲಬಾಧೆಯಿಂದಾಗಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಪತಿ-ಪತ್ನಿ ಹಾಗೂ ಅವರ ಮೂವರು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸದಾಶಿವನಗರ ನಿವಾಸಿ ಗರೀಬ್ ಸಾಬ್, ಪತ್ನಿ ಸುಮಯಾ, ಮಗಳು ಹಜೀನಾ, ಗಂಡು ಮಕ್ಕಳಾದ ಮೊಹ್ಮದ್ ಶಬೀರ್, ಮೊಹಮದ್ ಮುನೀರ್ ಆತ್ಮಹತ್ಯೆಗೆ ಶರಣಾದವರು.

ಗರೀಬ್ ಸಾಬ್ ಕಬಾಬ್ ಅಂಗಡಿ ಇಟ್ಟುಕೊಂಡಿದ್ದರು. ಒಂದು ವರ್ಷದಿಂದ ಸದಾಶಿವನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವುದಾಗಿ ಎರಡು ಪುಟಗಳ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳಕ್ಕೆ ತುಮಕೂರು ಎಸ್‍ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಮಗೆ 7:30 ರ ಸಮಯಕ್ಕೆ ಕರೆ ಬಂದಿತು. ಒಂದೇ ಮನೆಯಲ್ಲಿ ಐವರು ನೇಣು ಹಾಕಿಕೊಂಡಿದ್ದಾರೆ ಎಂಬ ಮಾಹಿತಿ ಬಂತು. ಐದು ನಿಮಿಷಕ್ಕೆ ನಾವು ಸ್ಥಳಕ್ಕೆ ಬಂದಿದ್ವಿ. ಇಬ್ಬರ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದವು. ಮೂವರು ಮಕ್ಕಳ ಮೃತದೇಹ ಹಾಸಿಗೆಯಲ್ಲಿದ್ದವು. ಅವರ ಕತ್ತಿನ ಮೇಲೆ ಕೆಲವು ಮಾರ್ಕ್‍ಗಳಿವೆ ಎಂದು ತಿಳಿಸಿದ್ದಾರೆ.

ಸಾವಿಗೂ ಮುನ್ನ ಸಂಬಂಧಿಕರಿಗೆ 5 ನಿಮಿಷ 22 ಸೆಕೆಂಡ್ ವೀಡಿಯೋವನ್ನು ಗರೀಬ್ ಸಾಬ್ ಕಳುಹಿಸಿದ್ದಾರೆ. ಅದರಲ್ಲಿ ಏನು ಮಾಹಿತಿಯಿದೆ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ವೀಡಿಯೋ ಆಧಾರ ಹಾಗೂ ದೂರು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.