ಸಾವಿನಲ್ಲೂ ಸಾರ್ಥಕತೆ : ತುಮಕೂರು ಅಪಘಾತದಲ್ಲಿ ಮೃತಪಟ್ಟ 9 ಮಂದಿ ಪೈಕಿ 6 ಜನರ ಕಣ್ಣು ದಾನ…

50
firstsuddi

ತುಮಕೂರು : ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ 9 ಜನರ ಪೈಕಿ, 6 ಜನರ ಕಣ್ಣು ದಾನ ಮಾಡಲಾಗಿದೆ. ಈ ಮೂಲಕ ಕುಟುಂಬ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮೃತಪಟ್ಟ ಚಾಲಕ ಕೃಷ್ಣ, ಸಿದ್ದಯ್ಯಸ್ವಾಮಿ, ನಿಂಗಣ್ಣ, ಮೀನಾಕ್ಷಿ, ಸುಜಾತಾ, ಪ್ರಭುಸ್ವಾಮಿ ಎಂಬವರ ನೇತ್ರದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಶಿರಾ ತಹಶಿಲ್ದಾರ್ ಮಮತಾ ಮಾತನಾಡಿ, ಮೃತರ ಕುಟುಂಬಸ್ಥರು ಸಾರ್ಥಕ ಕೆಲಸ ಮಾಡಿದ್ದಾರೆ. 6 ಜನರ ಕುಟುಂಬಸ್ಥರು ಸ್ವ-ಇಚ್ಛೆಯಿಂದ ಕಣ್ಣು ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬರ ಬಾಳಲ್ಲಿ ಬೆಳಕಾಗಲು ಬಯಸಿದ್ದಾರೆ. ಆ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೋಷಿಸಿದ ಸಿಎಂ: ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇದು ದುರ್ದೈವ ಸಂಗತಿ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಪಘಾತದಲ್ಲಿ 9 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ನೀಡುತ್ತೇವೆ ಎಂದು ಹೇಳಿದರು.