ಸಾವು ಗೆದ್ದ ಸಾತ್ವಿಕ್: ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕನ ರಕ್ಷಣೆ…

44
firstsuddi

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್​​ನನ್ನು ಸತತ 20 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ರಕ್ಷಣೆ ಮಾಡಲಾಗಿದೆ.

ಮಗುವಿನ ಪೋಷಕರಾದ ಸತೀಶ್ ಮತ್ತು ಪೂಜಾ ದಂಪತಿ ಹಾಗೂ ಸ್ಥಳೀಯರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಸಾತ್ವಿಕ್​​ನನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ನಿರಂತರ ಕಾರ್ಯಾಚರಣೆ ನಡೆಸಿ ಮಗು ಸಾತ್ವಿಕ್​​ನನ್ನು ರಕ್ಷಿಸಿದ ಸಿಬ್ಬಂದಿಯ ಬಗ್ಗೆ ಇದೀಗ ಎಲ್ಲೆಡೆ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗುತ್ತಿದೆ. ಸಾತ್ವಿಕ್​​ನನ್ನು ತಕ್ಷಣವೇ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಎಸ್​ಡಿಆರ್​ಎಫ್ ತಂಡ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಇವರಿಗೆ ಬೆಳಗಾವಿಯಿಂದ ಬಂದಿದ್ದ ಶ್ರೀಶೈಲ್ ಚೌಗಲಾ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್​ಡಿಆರ್​ಎಫ್), ಸ್ಥಳೀಯ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಸಾಥ್ ನೀಡಿದರು.
ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪುತ್ತಿದ್ದಂತೆಯೇ ಆಂಬುಲೆನ್ಸ್ ಸಿದ್ಧವಾಗಿ ಇರಿಸಲಾಗಿತ್ತು. ಮಗುವನ್ನು ಕೊಳವೆ ಬಾವಿಯಿಂದ ಹೊರ ತೆಗೆಯುತ್ತಿದ್ದಂತೆಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಂತಿಮ ಹಂತದ ಕಾರ್ಯಾಚರಣೆ ವೇಳೆ ಮಗು ಅಳುತ್ತಿರುವ ಶಬ್ದ ರಕ್ಷಣಾ ಸಿಬ್ಬಂದಿಗೆ ಕೇಳಿಸುತ್ತಿತ್ತು. ಯಂತ್ರಗಳ ಸದ್ದು ಹೆಚ್ಚಾದಂತೆ ಮಗು ಅಳುತ್ತಿರುವುದೂ ಹೆಚ್ಚಾಗಿತ್ತು, ಮಗು ಚೀರಾಡುತ್ತಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಸತೀಶ್ ಮತ್ತು ಪೂಜಾ ದಂಪತಿಯ ಪುತ್ರ ಸಾತ್ವಿಕ್ ಮುಜಗೊಂಡ ಬಾಲಕನು ನಿನ್ನೆ ಸಂಜೆ 5.30ರ ಸುಮಾರಿಗೆ ಆಟವಾಡಲು ಹೋಗಿದ್ದ ವೇಳೆ ಆಯತಪ್ಪಿ ಕೊಳವೆ ಬಾವಿಗೆ ಬಿದ್ದಿದ್ದ.  ಸಂಜೆ 6 ಗಂಟೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಎಸ್​ಡಿಆರ್​ಎಫ್ ಹಾಗೂ ಎಸ್​ಡಿಆರ್​ಎಫ್ ತಂಡಗಳು ಸತತವಾಗಿ ಕಾರ್ಯಾಚರಣೆ ನಡೆಸಿ ಕೊನೆಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.