ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರಕ್ಕೆ ಪ್ರತಿಭಟನಾ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಸರ್ಕಾರ ಇದ್ದ ಸಮಯದಲ್ಲಿ ಬಡವರಿಗೆ ನಾವು 7 ಕೆ.ಜೆ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆವು. ಅಲ್ಲದೇ ಸಮ್ಮಿಶ್ರ ಸರ್ಕಾರ ಇದ್ದ ಸಮಯದಲ್ಲೂ ಅದರಂತೆ ಅಕ್ಕಿಯನ್ನು ಬಡಜನರಿಗೆ ನೀಡಿದ್ದೇವೆ. ಆದರೆ ಇತ್ತೀಚೆಗೆ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರ ಬಂದ ಮೇಲೆ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ನೀಡುತ್ತಿದ್ದ ಅಕ್ಕಿಯಲ್ಲಿ 3 ಕೆ.ಜಿ ಕಡಿಮೆ ಮಾಡಬೇಕು ಎಂದು ಚರ್ಚಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಕ್ಕಿ ನೀಡುವುದನ್ನು ಕಡಿಮೆ ಮಾಡಿ ಅದರಲ್ಲಿ ಉಳಿತಾಯವಾದ ಹಣವನ್ನು ಬಿಜೆಪಿ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಗೆ ಹೊಂದಿಸಿಕೊಳ್ಳಲು ತೀರ್ಮಾನ ನಡೆದಿದೆ. ಅಕ್ಕಿ ಕಡಿಮೆ ಮಾಡಿದರೆ ಬಡವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಬಡವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಬಡವರು ಇದನ್ನು ಸಹಿಸುವುದಿಲ್ಲ. ಒಂದು ವೇಳೆ ಅಕ್ಕಿಯಲ್ಲಿ ಕಡಿಮೆ ಮಾಡಿದರೆ ನಾವು ಬೀದಿಗಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.










