ಮೈಸೂರು: ಮುಡಾ ಕೇಸ್‍ನಲ್ಲಿ ಸಂಕಷ್ಟ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಬೇನಾಮಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ತನಿಖೆಗೆ ಆಗ್ರಹಿಸಿದ್ದು, ಅಧಿಕಾರಿಗಳು ತಡ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರು ಕೆಸರೆ ಗ್ರಾಮದ ಜಾಗವನ್ನ ಅರಿಶಿನ ಕುಂಕುಮ ರೂಪದಲ್ಲಿ ಪತ್ನಿಗೆ ಕೊಟ್ಟಿದ್ದಾರೆ ಎಂದು ಹೇಳಿದ್ದರು. ಈಗ ಮತ್ತೆ ಮಲ್ಲಿಕಾರ್ಜುನಸ್ವಾಮಿ ಒಂದು ಎಕರೆ ದಾನ ಮಾಡಿದ್ದಾರೆ. ಯಾಕೆ ಮಲ್ಲಿಕಾರ್ಜುನಸ್ವಾಮಿ ಖರೀದಿ ಮಾಡಿದ ಭೂಮಿಗಳನ್ನೇ ದಾನ ಮಾಡ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರು ಎಲ್ಲಿಯೂ ಹೇಳಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಪಾರ್ವತಿ ಅವರ ಕುಟುಂಬದ ಒಡೆತನದ ಒಟ್ಟು ಆಸ್ತಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರು ಸಂಪಾದಿಸಿರುವ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮೈಸೂರು ತಾಲ್ಲೂಕಿನ ಆಲನಹಳ್ಳಿಯಲ್ಲಿ ಸರ್ವೆ ನಂ.113/4 ರಲ್ಲಿ 1 ಎಕರೆ ಭೂಮಿಯನ್ನು ಖರೀದಿ ಮಾಡಿದ್ದಾರೆ. ಇದು ಬೇನಾಮಿ ಆಸ್ತಿಯಾಗಿದೆ. ಈ ಕುರಿತಂತೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಕೊಳ್ಳುವಂತೆಯೂ ಮನವಿ ಮಾಡಲಾಗಿದೆ.










