ಸಿದ್ದರಾಮಯ್ಯಗೆ ತಾಕತ್ತಿದ್ರೆ ಸ್ವಂತ ಪಕ್ಷ ಕಟ್ಟಿ, 5 ಸೀಟು ಗೆದ್ದು ತೋರಿಸಲಿ : ಹೆಚ್‍ಡಿಕೆ.

49
firstsuddi

ರಾಯಚೂರು: ಸಿದ್ದರಾಮಯ್ಯ ಅವರಿಗೆ ತಾಕತ್ ಇದ್ದರೇ, ಸ್ವಂತ ಪಕ್ಷ ಕಟ್ಟಿ, 5 ಸೀಟು ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸವಾಲ್ ಹಾಕಿದ್ದಾರೆ.

ರಾಯಚೂರಿನಲ್ಲಿಂದು ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮಪ್ರಭುಗಳ ಮಾತುಗಳು ಕುಮಾರಸ್ವಾಮಿಯವರಿಗೆ ಹೊಂದಿಕೆಯಾಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ ಪಕ್ಷದಿಂದ ಬೆಳೆದು ಹೋಗಿ, ಇನ್ಯಾವುದೋ ಪಕ್ಷದಲ್ಲಿದ್ದುಕೊಂಡು ಮಾತನಾಡುತ್ತಾರೆ. ಸಿದ್ದರಾಮಯ್ಯಗೆ ಚಾಲೆಂಜ್ ಹಾಕ್ತೀನಿ ಕಾಂಗ್ರೆಸ್ ಪಕ್ಷ ಬಿಟ್ಟು ಬಂದು, ಸ್ವಂತ ಪಕ್ಷ ಕಟ್ಟಿ 5 ಸೀಟು ಗೆದ್ದುಕೊಂಡು ಬರಲಿ. ನಾವೆಲ್ಲ ಇದ್ದಾಗಲೇ 58 ಸೀಟು ಬಂದಿತ್ತು ಅಂತಾರೆ, ಅವರು ಹೋದಾಗಲೆ ಏಕಾಂಗಿ ಹೋರಾಟದಲ್ಲಿ 40 ಸೀಟು ತಂದಿದ್ದೇವೆ. ಈ ಚುನಾವಣೆಯಲ್ಲಿ ರಾಜ್ಯಾದ್ಯಂತ ಪಕ್ಷಕ್ಕೆ ಶಕ್ತಿ ಜನ ಕೊಡ್ತಾರೆ. ಸಿದ್ದರಾಮಯ್ಯ ಸವಾಲು ಸ್ವೀಕಾರ ಮಾಡಿಕೊಂಡು ಹೊರಟಿದ್ದೇನೆ ಎಂದರು.

ಪಕ್ಷ ವಿಸರ್ಜನೆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, ಈ ಬಾರಿ ನಾಡಿನ ಜನತೆ ನನಗೆ ಆಶೀರ್ವಾದ ಮಾಡಿದ ಮೇಲೆ ಬಡ ಕುಟುಂಬಗಳ ಬಡತನ ಹೋಗಲಾಡಿಸದಿದ್ರೆ, 5 ವರ್ಷ ಆಡಳಿತ ನಡೆಸಿದ ಮೇಲೆ ಕೆಲಸ ಮಾಡಿಲ್ಲ ಅಂದ್ರೆ ಪಕ್ಷ ವಿಸರ್ಜನೆ ಮಾಡ್ತಿನಿ ಅಂದಿದ್ದೆ. ಡಿಕೆಶಿಗೆ ನಾನು ಮಾತನಾಡಿದ್ದು ಅರ್ಥ ಆಗಿಲ್ಲ. ಯಾರೋ ಬರೆದುಕೊಟ್ಟದನ್ನ ಓದೋರು ಅವರು. ನಾನು ಮಾತನಾಡಿದ್ದು ಮತ್ತೊಮ್ಮೆ ನೋಡಲಿ. 200 ಯುನಿಟ್ ಉಚಿತ, 2 ಸಾವಿರ ರೂ ಖಚಿತ ಹೇಳಿದ್ರೆ ಇನ್ನೆರೆಡು ಸೀಟ್ ಬರುತ್ತೆ. ಅದನ್ನ ಬಿಟ್ಟು ಕುಮಾರಸ್ವಾಮಿ ಭಜನೆ ಮಾಡಿದರೆ ಬರೋ ಸೀಟು ನಿಮಗೆ ಬರಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯ ಅವರದ್ದು ಕೊನೆಯ ಚುನಾವಣೆ ಎಂಬ ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿರುವ ಹೆಚ್ ಡಿಕೆ, ತಾಯಿ ಚಾಮುಂಡೇಶ್ವರಿಯೇ ಅವರ ಮಗನ ಬಾಯಿಂದ ಹೇಳಿಸಿದ್ದಾರೆ. ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಲಿ, ಅಲ್ಲೇ ಅವರ ಕೊನೆ ಚುನಾವಣೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.