ಸಿದ್ಧವಾಯ್ತು ವಿಶ್ವದ ಮೊದಲ ಕೊರೊನಾ ಲಸಿಕೆ…!

213
firstsuddi

ಮಾಸ್ಕೋ : ಮಹಾಮಾರಿ ಕೊರೊನಾ ಅಟ್ಟಹಾಸದಿಂದ ನಲುಗಿಹೋಗಿದ್ದ ವಿಶ್ವಕ್ಕೆ ಶುಭ ಸುದ್ದಿಯೊಂದು ಕೇಳಿ ಬಂದಿದ್ದು, ವಿಶ್ವದ ಮೊದಲ ಕೊರೊನಾ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದೆ. ಈ ಕುರಿತು ಪ್ರಕಟಣೆ ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ವಿಶ್ವದ ಮೊದಲ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಲಾಗಿದ್ದು, ಸೋಂಕಿತರ ಮೇಲೆ ಮೂರು ಹಂತದಲ್ಲಿ ಪ್ರಯೋಗ ನಡೆಸಲಾಗಿದ್ದು, ಉತ್ತಮ ಫಲಿತಾಂಶ ದೊರಕಿದೆ. ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡ ಪರಿಣಾಮ ಕಂಡುಬರದ ಹಿನ್ನೆಲೆ, ರಷ್ಯಾ ಆರೋಗ್ಯ ಸಚಿವಾಲಯ ಲಸಿಕೆಯನ್ನು ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಲಸಿಕೆಯನ್ನು ಮಾಸ್ಕೋದ ಗಮೇಲಿಯಾ ಸಂಶೋಧನಾ ಸಂಸ್ಥೆ ಹಾಗೂ ರಷ್ಯಾ ರಕ್ಷಣಾ ಸಚಿವಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯನ್ನು ಮೊದಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಗೆ ನೀಡಲಾಗಿದೆ. ಜೂನ್ 18 ರಿಂದ ಹಂತ ಹಂತವಾಗಿ ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗವನ್ನು ನಡೆಸಲಾಗಿತ್ತು. ಲಸಿಕೆ ಪ್ರಯೋಗದ ಬಳಿಕ ಸೋಂಕಿತರಲ್ಲಿ ಯಾವುದೇ ಅಡ್ಡ ಪರಿಣಾಮ ಇಲ್ಲದ ಕಾರಣ ಮೂರನೇ ಹಂತದಲ್ಲಿ 38 ಮಂದಿಗೆ ಲಸಿಕೆಯನ್ನು ನೀಡಲಾಗಿದ್ದು, ಉತ್ತಮ ಫಲಿತಾಂಶ ಕಂಡಿದೆ. ಆಗಸ್ಟ್ ತಿಂಗಳ ಅಂತ್ಯದಲ್ಲಿ ಲಸಿಕೆ ಉತ್ಪಾದನಾ ಕಾರ್ಯ ಆರಂಭವಾಗಲಿದ್ದು, ಸೆಪ್ಟೆಂಬರ್ ವೇಳೆಗೆ ಮೊದಲ ಹಂತದ ಉತ್ಪಾದನೆ ಸಿದ್ಧವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.