ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಬೈಕ್ ಸವಾರನ ಮೇಲೆ ಕಾರು ಚಾಲಕನೋರ್ವ ಗುಂಡು ಹಾರಿಸಿದ್ದಾನೆ. ಯಶವಂತಪುರ ಠಾಣಾ ವ್ಯಾಪ್ತಿಯ ಎಂ.ಎಸ್.ರಾಮಯ್ಯ ಆಸ್ಪತ್ರೆ ಹಿಂಬದಿಯ ರಸ್ತೆಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾರಿಗೆ ಬೈಕ್ ತಾಗಿಸಿದ ನೆಪದಲ್ಲಿ ಬೈಕ್ ಸವಾರ ಅನಿಲ್ ಎಂಬವರ ಜೊತೆ ಕಾರು ಚಾಲಕ ಗಲಾಟೆ ಮಾಡಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಕಾರು ಚಾಲಕ ಪಿಸ್ತೂಲು ತೆಗೆದು ಅನಿಲ್ ಕಡೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಆದರೆ ಎರಡು ಗುಂಡುಗಳು ಅನಿಲ್ ಗೆ ತಗುಲಿಲ್ಲ. ಸ್ಥಳದಿಂದ ಆರೋಪಿ ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










