ಬೆಂಗಳೂರು : ಸೂಕ್ಷ್ಮ ನೀರಾವರಿ ಯೋಜನೆಯಡಿ ರಾಜ್ಯಕ್ಕೆ 2ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 2ನೇ ಕಂತಿನ ಅನುದಾನ ಬಿಡುಗಡೆ ಆಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಶೇ.25 ರಷ್ಟು ಹೆಚ್ಚಿನ ಕೇಂದ್ರದ ಪಾಲಿನ ಅನುದಾನ ಪಡೆಯಲಾಗಿದೆ.
2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಪಿಎಂಕೆಎಸ್ ವೈ, ಪಿಡಿಎಂ ಅಡಿ 400 ಕೋಟಿ ರೂ. ಬಿಡುಗಡೆ ಮಾಡಿತ್ತು. 2021-22 ನೇ ಸಾಲಿನಲ್ಲಿ ರಾಜ್ಯದಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕೇಂದ್ರ ಸರ್ಕಾರ ಇದೀಗ ರಾಜ್ಯದ ಮನವಿಯಂತೆ 500 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಿದೆ.
ಪ್ರಸಕ್ತ ಸಾಲಿನಲ್ಲಿ ಕೇಂದ್ರವು ಹಂಚಿಕೆ ಮಾಡಿದ 500 ಕೋಟಿ ರೂ.ಗಳಲ್ಲಿ ಮೊದಲ ಕಂತಿನ ಅನುದಾನವನ್ನಾಗಿ ರಾಜ್ಯಕ್ಕೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಉಳಿದ 200 ಕೋಟಿ ರೂ.ಗಳನ್ನು ರಾಜ್ಯಕ್ಕೆ ನಿನ್ನೆ ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮವು ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆಗಳನ್ನು ಒಳಗೊಂಡಿರುತ್ತದೆ. ಕೇಂದ್ರ ಸರ್ಕಾರ ಹಂಚಿಕೆ ಮಾಡಿದ ಅನುದಾನದಲ್ಲಿ ಶೇ. 76ರಷ್ಟು ಸಾಮಾನ್ಯ ವರ್ಗಕ್ಕೆ, ಶೇ.17ರಷ್ಟು ಪರಿಶಿಷ್ಟ ಜಾತಿಗೆ ಹಾಗೂ ಶೇ.7ರಷ್ಟು ಪರಿಶಿಷ್ಟ ಪಂಗಡಕ್ಕೆ ನಿಗದಿಪಡಿಸಲಾಗಿದೆ.










