ಸೌದಿಯಲ್ಲಿ ಬಂಧನಕ್ಕೊಳಗಾಗಿದ್ದ ಹರೀಶ್ ಬಂಗೇರ ತಾಯ್ನಾಡಿಗೆ ವಾಪಸ್…

94
firstsuddi

ಉಡುಪಿ : ಫೇಸ್ ಬುಕ್ ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ ಆರೋಪದಡಿಯಲ್ಲಿ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ ಹರೀಶ್ ಬಂಗೇರ ಒಂದು ವರ್ಷ ಏಳು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿ ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಕೋಟೇಶ್ವರದ ಗೋಪಾಡಿ ಗ್ರಾಮದ ಹರೀಶ್ ಬಂಗೇರ ಅವರ ಹೆಸರಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು, ಸೌದಿ ಅರೇಬಿಯಾ ದೊರೆ ವಿರುದ್ಧ ಫೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಮಾಡಿದವರು ಬಂಗೇರ ಎಂದೇ ಭಾವಿಸಿದ್ದ ಸೌದಿ ಪೊಲೀಸರು ಬಂಗೇರ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದರು. ಈ ವೇಳೆ ಬಂಗೇರ ಪತ್ನಿ ಸುಮನ ಮಾಧ್ಯಮಗಳಿಗೆ ಮಾಹಿತಿ ನೀಡಿ ತನ್ನ ಪತಿಯನ್ನು ಷಡ್ಯಂತ್ರ ಮಾಡಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದರಲ್ಲದೆ ನಿರಪರಾಧಿಯಾದ ಪತಿಯ ಬಿಡುಗಡೆಗೆ ಸಹಕರಿಸುವಂತೆ ಕಣ್ಣೀರಿಟ್ಟಿದ್ದರು. ಹರೀಶ್ ಬಂಗೇರ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು ಅನಗತ್ಯ ಫೋಸ್ಟ್ ಮಾಡಿರುವ ಕುರಿತು ತನಿಖೆ ನಡೆಸುವಂತೆ ಅವರ ಪತ್ನಿ ನೀಡಿರುವ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಜಿಲ್ಲಾ ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದರೆಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಪ್ರಕರಣದ ವಿಚಾರಣೆಯಲ್ಲಿ ಹರೀಶ್ ಬಂಗೇರ ಅವರ ನಕಲಿ ಖಾತೆ ತೆರೆದಿರುವ ಹಾಗೂ ಈ ಖಾತೆಗೂ ಬಂಗೇರ ಅವರಿಗೂ ಸಂಬಂಧ ಇಲ್ಲದೆ ಇರುವ ಅಂಶಗಳು ಬೆಳಕಿಗೆ ಬಂದಿತ್ತು. ತನಿಖೆಯಲ್ಲಿ ಕಂಡು ಬಂದಿದ್ದ ಅಂಶಗಳನ್ನು ರಾಯಭಾರಿ ಕಚೇರಿ ಮೂಲಕ ಸೌದಿ ಅರೇಬಿಯಾ ಸರ್ಕಾರಕ್ಕೂ ತಲುಪಿಸಲಾಗಿತ್ತು. ಈ ತನಿಖಾ ಅಂಶಗಳೇ ಬಂಗೇರ ಅವರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಪ್ರಕರಣ ಕುರಿತು ಬಂಗೇರ ಕುಟುಂಬ ಸ್ನೇಹಿತ ಲೋಕೇಶ್ ಅಂಕದಕಟ್ಟೆ ಸಮಾನಮನಸ್ಕರೊಂದಿಗೆ ಬಿಡುಗಡೆ ಬಗ್ಗೆ ನಿರಂತರ ಪ್ರಯತ್ನ ಮಾಡಿದ್ದರು. ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರ‌ನಾಥ್ ಶ್ಯಾನುಭಾಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ , ಹಿರಿಯ ಪೊಲೀಸ್ ಅಧಿಕಾರಿ ಕಮಲಪಂತ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹರೀಶ್ ಬಂಗೇರ ಬಿಡುಗಡೆಯ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಇದೆಲ್ಲದರ ಫಲವಾಗಿ ಕೊನೆಗೂ ಹರೀಶ್ ಬಂಗೇರಾ ತಾಯ್ನಾಡಿಗೆ ಮರಳಿ ತನ್ನ ಕುಟುಂಬವನ್ನು ಸೇರಿದ್ದಾರೆ.

ಹರೀಶ್ ಬಂಗೇರರವರು ತಾಯ್ನಾಡಿಗೆ ಮರಳಲು ಪೂರೈಸಬೇಕಾಗಿದ್ದ ವಿಧಿ- ವಿಧಾನಗಳೆಲ್ಲವೂ ಪೂರ್ಣಗೊಂಡಿದ್ದು ಇದೇ ಆಗಸ್ಟ್ 17ರಂದು ಸೌದಿ ಅರೇಬಿಯಾದ ದಮಾಮ್ ವಿಮಾನ ನಿಲ್ದಾಣದಿಂದ ದೋಹಾ ಹೊರಟು ದೋಹಾ ಮೂಲಕ ಆಗಸ್ಟ್ 18 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ಸೌದಿ ಅರೇಬಿಯಾ ದ ರಿಯಾದ್ ನಲ್ಲಿರುವ ಭಾರತೀಯ ದೂತವಾಸದಿಂದ ಅಧಿಕೃತ ಮಾಹಿತಿ ಬಂದಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಮಾಹಿತಿ ನೀಡಿದ್ದರು.