ಸ್ಕೂಲ್ ಯಾವಾಗ ಓಪನ್ ಮಾಡ್ತೀರಾ? – ಶಿಕ್ಷಣ ಸಚಿವರಿಗೆ ಬಾಲಕನ ಪ್ರಶ್ನೆ!

104
firstsuddi

ಹಾಸನ : ಸ್ಕೂಲ್ ಯಾವಾಗ ಓಪನ್ ಮಾಡ್ತೀರಾ? ಎಂದು ಬಾಲಕ ಕೇಳಿದ ಪ್ರಶ್ನೆಗೆ ಸಚಿವರು ಪುಟ್ಟ ಮಗುವಿನ ಮಾತಿಗೆ ಅಷ್ಟೇ ಮುಗ್ಧತೆಯಿಂದ ಸ್ಪಂದಿಸಿದ್ದಾರೆ.

ಶೃಂಗೇರಿಯಿಂದ ತಿಪಟೂರಿಗೆ ತೆರಳುವ ಮಾರ್ಗಮಧ್ಯೆ ಅರಸೀಕೆರೆಯಲ್ಲಿ ಉದ್ಯಮಿ ದತ್ತಾತ್ರೇಯ ಅವರ ಮನೆಗೆ ಶಿಕ್ಷಣ ಸಚಿವರು ಭೇಟಿ ನೀಡಿದ್ದರು. ಈ ವೇಳೆ ದತ್ತಾತ್ರೇಯ ಅವರ ಮೊಮ್ಮಗ ಶಿಕ್ಷಣ ಸಚಿವರಿಗೆ ಸ್ಕೂಲ್ ಯಾವಾಗ ಓಪನ್ ಮಾಡ್ತೀರಾ? ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಬಾಲಕನಿಗೆ ಶಾಲೆ ಯಾವಾಗ ಆರಂಭಿಸಬೇಕು ಎಂದು ಶಿಕ್ಷಣ ಸಚಿವರು ಮರು ಪ್ರಶ್ನಿಸಿದ್ದಾರೆ. ಬಾಲಕ ನಾಳೆ ಎಂದು ಉತ್ತರ ಕೊಟ್ಟಿದ್ದಾನೆ. ಅದಕ್ಕೆ ಶಿಕ್ಷಣ ಸಚಿವರು, ಗ್ಯಾರಂಟಿನಾ.. ನಾಳೆಯಿಂದ ಹೋಗ್ತೀಯಾ ನೀನು..? ಎಂದು ತಮಾಷೆ ಮಾಡಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಳಿಕ ಅರಸೀಕೆರೆಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ.ನಾಗೇಶ್ ಅವರು, ಸಿಎಂ ಜೊತೆ ತಜ್ಞರ ಚರ್ಚೆ ನಂತರ ಆರರಿಂದ ಎಂಟು ಅಥವಾ ಒಂದರಿಂದ ಎಂಟನೇ ತರಗತಿ ಆರಂಭದ ಬಗ್ಗೆ ನಿರ್ಧಾರವಾಗಲಿದೆ. 23 ರಿಂದ 30 ರವರೆಗೆ ನಡೆದಿರುವ ತರಗತಿಗಳ ಬಗ್ಗೆ ತಾಂತ್ರಿಕ ಸಮಿತಿ ವರದಿ ಸಲ್ಲಿಸಲಿದೆ. ಆ ವರದಿ ಆಧಾರದ ಮೇಲೆ ಬೇರೆ ತರಗತಿ ತೆರೆಯುವ ಬಗ್ಗೆ ಆಲೋಚನೆ ಇದೆ. 9 ರಿಂದ 12ನೇ ತರಗತಿಯವರು ಶೇ.70 ರಷ್ಟು ಮಕ್ಕಳು ಹಾಜರಾಗಿದ್ದಾರೆ. ಎಲ್ಲಿಯೂ ಸಮಸ್ಯೆಯಾಗಿಲ್ಲ. ಆ ಮಾನದಂಡದ ಆಧಾರದ ಮೇಲೆ 6 ರಿಂದ 8 ಅಥವಾ 1 ರಿಂದ 8 ನೇ ತರಗತಿ ತೆರೆಯುವ ಆಲೋಚನೆ ಮಾಡುತ್ತೇವೆ ಎಂದರು.