ತಿರುವನಂತಪುರಂ : ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂದೂರಿನಲ್ಲಿ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಪತ್ತೆಯಾಗಿದ್ದ ಮಹಿಳೆಯರಿಬ್ಬರ ಶವ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹೆಚ್ಚು ಹಣ ಗಳಿಸಲು ಮಾಟಮಂತ್ರದ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ಬಲಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮೃತರನ್ನು ಪದ್ಮಾ ಹಾಗೂ ರೋಸ್ಲಿನ್ ಎಂದು ಗುರುತಿಸಲಾಗಿದ್ದು, ಇವರನ್ನು ಅಪಹರಣ ಮಾಡಿ ನರಬಲಿ ನೀಡಲಾಗಿದೆ ಎಂದು ಪೊಲೀಸರಿಂದ ಮಾಹಿತಿ ಲಭಿಸಿದೆ. ಸದ್ಯ ಆರೋಪಿಗಳಾದ ಭಗವಾಲ್ ಸಿಂಗ್, ಆತನ ಪತ್ನಿ ಲೀಲಾ ಹಾಗೂ ಏಜೆಂಟ್ ಶಿಹಾಬ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸೆ. 26ರಂದು ಕಡವಂತ್ರದಿಂದ ಪದ್ಮಾ ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಕಾಲಡಿಯಿಂದ ರೋಸ್ಲಿನ್ ಇದೇ ರೀತಿ ನಾಪತ್ತೆ ಆಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಪದ್ಮಾ ಅವರ ಮೊಬೈಲ್ ಸಿಗ್ನಲ್ ತಿರುವಲ್ಲಾನಲ್ಲಿ ಟ್ರ್ಯಾಕ್ ಮಾಡಿದ್ದಾರೆ. ಇದಾದ ಬಳಿಕ ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರಿಗೆ ತಿರುವಲ್ಲಾದಲ್ಲಿ ಇಬ್ಬರು ಮಹಿಳೆಯರ ದೇಹಗಳು ಕತ್ತು ಸೀಳಿ, ತುಂಡು ತುಂಡಾಗಿ ಕತ್ತರಿಸಿ ಹೂಳಲಾದ ಶವವಾಗಿ ಪತ್ತೆಯಾಗಿದೆ.
ಈ ಬಗ್ಗೆ ಕೊಚ್ಚಿ ನಗರ ಪೊಲೀಸ್ ಆಯಕ್ತರು ಮಾತನಾಡಿ, ಇಬ್ಬರು ಮಹಿಳೆಯರನ್ನು ಕೊಂದು ಅವರ ಮನೆಯ ಸಮೀಪ ಹೂಳಲಾಗಿದೆ. ಈ ಕೊಲೆಯು ನರಬಲಿಯ ಭಾಗವಾಗಿತ್ತು. ಇದೇ ರೀತಿ ಮತ್ತೂ ಒಂದು ಪ್ರಕರಣವು ವರದಿಯಾಗಿದೆ. ಅದನ್ನು ಖಚಿತ ಪಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.










