ದಾದಾ ಸಾಹೇಬ್ ಕಾನ್ಸೀರಾಂ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು : ಕೆ.ಬಿ.ಸುಧಾ

80
firstsuddi

ಚಿಕ್ಕಮಗಳೂರು : ದಾದಾ ಸಾಹೇಬ್ ಕಾನ್ಸೀರಾಂ ಅವರ ಆದರ್ಶಗಳನ್ನು ಪಕ್ಷದ ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕು ಎಂದು ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಸಲಹೆ ನೀಡಿದರು.

ನಗರದ ಬಿಎಸ್‍ಪಿ ಕಛೇರಿಯಲ್ಲಿ ಇಂದು ನಡೆದ ಪಕ್ಷದ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಸೀರಾಂ ಅವರ ಪರಿನಿಬ್ಬಾಣ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕಾನ್ಸೀರಾಂ ಅವರು ಬಹುಜನ ಸಮಾಜಪಕ್ಷವನ್ನು ಸ್ಥಾಪಿಸಿದರು. ಆ ಮೂಲಕ ದೇಶದ ಬಹುಜನರು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಸಾಧ್ಯವಾಗುವಂತೆ ಮಾಡಿದರು ಎಂದರು.

ಸಾವಿರಾರು ಮೈಲಿಗಳಷ್ಟು ದೂರ ಸೈಕಲ್‍ನಲ್ಲಿ ಸಂಚರಿಸಿ ಬಹುಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಿದ ಕಾನ್ಸೀರಾಂ ಅವರ ಸಂದೇಶಗಳನ್ನು ಕಾಯಕರ್ತರು ತಪ್ಪದೇ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಬಿಎಸ್‍ಪಿ ರಾಜ್ಯ ಉಪಾಧ್ಯಕ್ಷ ಕೆ.ಆರ್.ಗಂಗಾಧರ್ ಮಾತನಾಡಿ ಬಹುಜನ ಸಮಾಜಪಕ್ಷದ ಹುಟ್ಟು ಮತ್ತು ಅದರ ಬೆಳವಣಿಗೆಯನ್ನು ಕಾರ್ಯಕರ್ತರಿಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಬಹುಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ಮತ್ತು ಆ ವರ್ಗವನ್ನು ಅಧಿಕಾರಕ್ಕೆ ತರಲು ಕಾನ್ಸೀರಾಂ ಅವರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದರು. ಅಂಬೇಡ್ಕರ್ ಅವರು ಎಳೆದು ತಂದ ರಥವನ್ನು ಮುಂದುವರೆಸಿದರು ಎಂದು ಹೇಳಿದರು.

ಪರಿನಿಬ್ಬಾಣ ದಿನದ ಪ್ರಯುಕ್ತ ಕಾನ್ಸೀರಾಂ ಅವರ ಭಾವಚಿತ್ರಕ್ಕೆ ಸಮಾರಂಭದಲ್ಲಿ ಸಾಮೂಹಿಕ ಪುಷ್ಪ ನಮನ ಸಲ್ಲಿಸಲಾಯಿತು, ಬಿಎಸ್‍ಪಿ ತಾಲ್ಲೂಕು ಅಧ್ಯಕ್ಷ ಹರೀಶ್ ಮಿತ್ರ, ಪಕ್ಷದ ಪದಾಧಿಕಾರಿಗಳಾದ ಸೋಮಶೇಖರ್, ನವೀನ್, ರೇಖಾ, ಗಿರೀಶ್, ಹೊನ್ನಪ್ಪ, ರವಿಕುಮಾರ್ ಉಪಸ್ಥಿತರಿದ್ದರು.