ಪತ್ನಿಯನ್ನು ಕೊಲ್ಲಲು ಹಾಕಿದ್ದ ಸ್ಕೆಚ್‍ಗೆ ಅತ್ತೆ ಬಲಿ!

100
firstsuddi

ಭೋಪಾಲ್ : ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಆದರೆ ಆತನ ಲೆಕ್ಕಾಚಾರವೇ ಉಲ್ಟಾ ಆಗಿತ್ತು. ಹೆಂಡತಿಯ ಬದಲು ಬಲಿಯಾದದ್ದು ಆತನ ಅತ್ತೆ. ಹೌದು, ವ್ಯಕ್ತಿಯೊಬ್ಬ ಪತ್ನಿಯನ್ನು ಸಾಯಿಸಲು ಕಬ್ಬಿಣದ ಬಾಗಿಲಿಗೆ ವಿದ್ಯುತ್ ತಂತಿಯನ್ನು ಅಳವಡಿಸಿದ್ದನು. ಆದರೆ ಪತ್ನಿ ಬದಲಿಗೆ ಆಕೆಯ ತಾಯಿ ಬಾಗಿಲನ್ನು ಸ್ಪರ್ಶಿಸಿ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.

ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿಖೇಡಾ ಎಂಬ ಗ್ರಾಮದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಪ್ರತಿನಿತ್ಯ ಕುಡಿದು ಬರುತ್ತಿದ್ದ ಆರೋಪಿ ಮತ್ತು ಆತನ ಪತ್ನಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಭಾನುವಾರ ರಾತ್ರಿ ಕೂಡ, ಕುಡಿತದ ವಿಚಾರದಲ್ಲಿ ಗಂಡ- ಹೆಂಡತಿ ಮಧ್ಯೆ ಕಿತ್ತಾಟ ನಡೆದಿತ್ತು. ಕೊನೆಗೆ ಸಿಟ್ಟಿಗೆದ್ದ ಹೆಂಡತಿ, ತನ್ನ ಅಮ್ಮನ ಮನೆಗೆ ತೆರಳಿದ್ದಳು.

ತನ್ನ ಪತ್ನಿ ಮನೆಯಿಂದ ಹೊರಟಿದ್ದಕ್ಕೆ ಕೋಪಗೊಂಡ ಆರೋಪಿ ತನ್ನ ಅತ್ತೆಯ ಮನೆಗೆ ಹೋಗಿ ಅಲ್ಲಿ ಕಬ್ಬಿಣದಿಂದ ತಯಾರಿಸಲಾಗಿದ್ದ ಬಾಗಿಲಿಗೆ ವಿದ್ಯುತ್ ತಂತಿಯಿಂದ ಜೋಡಿಸಿ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ. ಆದರೆ ಆತನ ಅತ್ತೆ ಬಾಗಿಲು ಮುಟ್ಟಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ. ಅಲ್ಲದೇ ಆರೋಪಿ ವಿರುದ್ಧ ಸೂಕ್ತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಪಲಾ ಸಿಂಗ್ ತಿಳಿಸಿದ್ದಾರೆ.