ಹಣ ಪಡೆದು ಕಾಂಗ್ರೆಸ್ ಬಿ ಫಾರಂ ವಿತರಣೆ ಆರೋಪ : ಚುನಾವಣಾ ಆಯೋಗಕ್ಕೆ ಕರಂದ್ಲಾಜೆ ದೂರು…

47
firstsuddi

ಬೆಂಗಳೂರು : ಕಾಂಗ್ರೆಸ್ ಪಕ್ಷ ಹಣ ಪಡೆದು ಬಿ ಫಾರಂ ವಿತರಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ಕಾನೂನು ಪ್ರಕಾರ ಚುನಾವಣೆಯಲ್ಲಿ ಅಭ್ಯರ್ಥಿಗಳು ಬಿ ಫಾರಂ ಪಡೆದುಕೊಳ್ಳಲು ಹಣ ಕೊಡುವ ಹಾಗಿಲ್ಲ. ಅದು ಲಂಚ ಆಗುತ್ತದೆ. ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಹಣ ಪಡೆದು ಬಿ ಫಾರಂ ವಿತರಣೆ ಮಾಡಿದ್ದಾರೆ. ಜನಪ್ರತಿನಿಧಿ ಕಾಯ್ದೆ 171ಡಿ ಪ್ರಕಾರ ಇದು ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನ 223 ಅಭ್ಯರ್ಥಿಗಳ ಬಿ ಫಾರಂ ಅನೂರ್ಜಿತಗೊಳಿಸಬೇಕು ಎಂದು ಆಗ್ರಹಿಸಿದರು.

ಅಭ್ಯರ್ಥಿಗಳ ಬಳಿ ಕಾಂಗ್ರೆಸ್ 2 ಲಕ್ಷ ಹಣ ಪಡೆದು ಬಿ ಫಾರಂ ನೀಡಿದೆ. ಈವರೆಗೂ 1,350 ಅರ್ಜಿಗಳು ಬಂದಿದ್ದು, ಡಿ.ಕೆ.ಶಿವಕುಮಾರ್ ಹೇಳಿದಂತೆ 23 ಕೋಟಿ ಹಣ ಸಂಗ್ರಹ ಆಗಿದೆ. ಕಾಂಗ್ರೆಸ್ ಬಿ ಫಾರಂಗೆ ಹಣ ಪಡೆದಿರುವುದರ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಚುನಾವಣಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.