ಹುಬ್ಬಳ್ಳಿ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರೂರು ಗ್ರಾಮದ ಜಗದೀಶ ಡಾಬಾದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ವರೂರು ಗ್ರಾಮದ ಸುಧೀರ ಹುಲಗಣ್ಣವರ್ (31) ಕೊಲೆಯಾದ ಯುವಕ. ಗ್ರಾಮದ ಸಾಗರ ಮಹಾದೇವಪ್ಪ ಗಬ್ಬನ್ನವರ ಹಾಗೂ ಸುಧೀರ್ ನಡುವೆ ಡಾಬಾದಲ್ಲಿ ಊಟ ಮಾಡುವ ವೇಳೆ ಹಣಕಾಸಿನ ವಿಚಾರಕ್ಕೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಸುಧೀರ್ ಮೇಲೆ ಸಾಗರ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಸುಧೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ಅಲ್ಲಿಂದ ಸಾಗರ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.










