ಹಣವಿಲ್ಲದೆ ಮಗುವಿನ ಶವವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಬಸ್‍ನಲ್ಲಿ ಸಂಚರಿಸಿದ ತಂದೆ.

50
firstsuddi

ಕೋಲ್ಕತ್ತಾ: ಅಂಬುಲೆನ್ಸ್‌ಗೆ ಬಾಡಿಗೆ ನೀಡಲು ಹಣವಿಲ್ಲದೆ ತಂದೆಯೊಬ್ಬ ಮಗುವಿನ ಶವವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಬಸ್‍ನಲ್ಲಿ ಸಂಚರಿಸಿದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ.

ಸಿಲಿಗುರಿಯ ಆಸ್ಪತ್ರೆಯೊಂದರಲ್ಲಿ ಆಶಿಮ್ ದೇವಶರ್ಮಾ ಎಂಬಾತ ತನ್ನ 5 ತಿಂಗಳ ಮಗುವನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ದಾಖಲಿಸಿದ್ದ. ಅಲ್ಲಿನ ವೈದ್ಯರು 6 ದಿನದಿಂದ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಈ ಸಮಯದಲ್ಲಿ ಮಗುವಿನ ಚಿಕಿತ್ಸೆಗಾಗಿ 16,000 ರೂ. ಖರ್ಚು ಮಾಡಿದ್ದಾಗಿ ತಿಳಿಸಿದ್ದಾರೆ.

ಸಿಲಿಗುರಿಯಿಂದ 200 ಕಿ.ಮೀ ದೂರದಲ್ಲಿರುವ ಕಲಿಯಗಂಜ್ ಎಂಬಲ್ಲಿ ಆಶಿಮ್ ದೇವಶರ್ಮಾ ವಾಸಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಮಗುವಿನ ಶವವನ್ನು ತನ್ನೂರಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದ. ಆದರೆ ಅಂಬುಲೆನ್ಸ್‌ನ ಡ್ರೈವರ್ 8,000 ರೂ. ಪಾವತಿಸುವಂತೆ ಕೇಳಿದ್ದರು. ಇದರಿಂದಾಗಿ 5 ತಿಂಗಳ ಮಗುವಿನ ಶವವನ್ನು ಬ್ಯಾಗ್‍ನಲ್ಲಿ ಕಟ್ಟಿಕೊಂಡು 200 ಕಿಮೀವರೆಗೆ ಬಸ್‍ನಲ್ಲಿ ಪ್ರಯಾಣಿಸಿದ್ದಾನೆ.

ಘಟನೆಗೆ ಸಂಬಂಧಿಸಿ ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.