ಮಂಗಳೂರು : ಹನಿಟ್ರ್ಯಾಪ್ ಮಾಡಿ ಜ್ಯೋತಿಷಿಯಿಂದ ಬರೋಬ್ಬರಿ 49 ಲಕ್ಷ ರೂ. ಸುಲಿಗೆ ಮಾಡಿದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಮಂಗಳೂರು ಮೇರಿಹಿಲ್ ನಿವಾಸಿ ಭವ್ಯ (30) ಮತ್ತು ಕುಮಾರ್ ಅಲಿಯಾಸ್ ರಾಜು (35) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಪದವಿನಂಗಡಿಯ ತಮ್ಮ ಮನೆಯಲ್ಲಿ ದಂಪತಿಗಳ ನಡುವಿನ ಸಮಸ್ಯೆ ಪರಿಹಾರಕ್ಕೆ ಪೂಜೆ ಮಾಡಬೇಕೆಂದು ಆರೋಪಿಗಳು ಚಿಕ್ಕಮಗಳೂರು ಮೂಲದ ಪುರೋಹಿತ, ಜ್ಯೋತಿಷಿಯನ್ನು ಕರೆಸಿದ್ದಾರೆ. ಬಳಿಕ ಆತನೊಂದಿಗೆ ಸಲಿಗೆಯಿಂದಿದ್ದ ವಿಡಿಯೋ, ಫೋಟೋ ಹಾಗೂ ಆಡಿಯೋಗಳನ್ನು ಇಟ್ಟುಕೊಂಡು ಹಣ ನೀಡದಿದ್ದರೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಜ್ಯೋತಿಷಿ ಹಂತ ಹಂತವಾಗಿ 15 ಲಕ್ಷ ರೂ. ನಗದು ಹಾಗೂ ಬ್ಯಾಂಕ್ ಖಾತೆಗೆ 34 ಲಕ್ಷ ರೂ. ಹಾಕಿದ್ದಾರೆ.
ಆದರೆ 49 ಲಕ್ಷ ರೂ. ನೀಡಿದರೂ ಇವರ ಬೇಡಿಕೆ ನಿಲ್ಲದ ಹಿನ್ನೆಲೆ ಮಂಗಳೂರು ಪೊಲೀಸರಿಗೆ ಜ್ಯೋತಿಷಿ ದೂರು ನೀಡಿದ್ದಾರೆ. ದೂರಿನನ್ವಯ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ತನಿಖೆಗೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.










