ಹಾಸನ : ಜೀನ್ಸ್ ಪ್ಯಾಂಟ್ ಧರಿಸಿ ಜಿಲ್ಲಾ ಪಂಚಾಯಿತಿ ಕಛೇರಿಗೆ ಬಂದಿದ್ದ ಆಲೂರು ತಾಲ್ಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿ ಪಿಡಿಓ ರುದ್ರೇಗೌಡ ಅವರಿಗೆ ವಸ್ತ್ರ ಸಂಹಿತೆ ಉಲ್ಲಂಘನೆ ಆರೋಪಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪರಮೇಶ್ ಅವರು ನೊಟೀಸ್ ನೀಡಿದ್ದಾರೆ. ಡಿಸೆಂಬರ್ 20ರಂದು ಆಲೂರು ಗ್ರಾಮ ಪಂಚಾಯಿತಿ ಪಿಡಿಓ ರುದ್ರೇಗೌಡ ಎಂಬುವವರು ಜೀನ್ಸ್ ಪ್ಯಾಂಟ್ ಧರಿಸಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಆಗಮಿಸಿದ್ದು, ಇದನ್ನು ಕಂಡ ಸಿಇಓ ಪರಮೇಶ್ ಅವರು ರುದ್ರೇಗೌಡ ಅವರ ಮೇಲೆ ಜವಾಬ್ದಾರಿಯುತ ನೌಕರನಾಗಿ ಬೇಜವಾಬ್ದಾರಿ ತೋರಿರುವುದಾಗಿ ಆರೋಪಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ಪ್ರಕಾರ ಏಕೆ ಶಿಸ್ತುಕ್ರಮ ಜರುಗಿಸಬಾರದೆದಂದು ನೊಟೀಸ್ ನೀಡಿದ್ದು, ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಜೀನ್ಸ್ ಪ್ಯಾಂಟ್ ಧರಿಸಿದರೆ ಸರ್ಕಾರದ ಘನತೆಗೆ ಧಕ್ಕೆ ತರುತ್ತಾ? ಜೀನ್ಸ್ ಪ್ಯಾಂಟ್ ಸಭ್ಯ ವರ್ತನೆ ಅಲ್ಲವಾ? ಇದು ಸರ್ಕಾರಿ ನೌಕರರಿಗೆ ಶೋಭೆ ತರಲ್ವಾ? ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.










