ಬೆಂಗಳೂರು: 10 ಅಡಿ ಎತ್ತರದಿಂದ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಹಾಸನದಿಂದ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದರೂ ಚಿಕಿತ್ಸೆ ಸಿಗದೇ ಒಂದು ವರ್ಷದ ಮಗು ಸಾವನ್ನಪ್ಪಿದೆ.
ಮಗು ತಾಯಿ ಕೈಯಿಂದ 10 ಅಡಿ ಮೇಲಿಂದ ಜಾರಿ ಕೆಳಗೆ ಬಿದ್ದಿತ್ತು. ತಲೆಗೆ ತೀವ್ರವಾದ ಗಾಯವಾಗಿ, ಅಸ್ವಸ್ಥವಾಗಿದ್ದ ಮಗುವನ್ನು ಪೋಷಕರು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್‌ಗೆ ಹೋಗುವಂತೆ ಅಲ್ಲಿನ ವೈದ್ಯರು ತಿಳಿಸಿದ್ದರು. ಇದರಂತೆ ಹಾಸನ ಪೊಲೀಸರ ನೆರವು ಪಡೆದ ಪೋಷಕರು ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಆ್ಯಂಬುಲೆನ್ಸ್ ಮೂಲಕ ನಿಮ್ಹಾನ್ಸ್ ಆಸ್ಪತ್ರೆಗೆ ಕರೆತಂದಿದ್ದರು.
ಝೀರೋ ಟ್ರಾಫಿಕ್‌ನಲ್ಲಿ ಮಗುವನ್ನು ಹಾಸನದಿಂದ ನಿಮಾನ್ಸ್‌ಗೆ ಕೇವಲ 1 ಗಂಟೆ 40 ನಿಮಿಷದಲ್ಲಿ ತಲುಪಿಸಲಾಗಿತ್ತು. ಆದರೆ ಆಡಳಿತ ಮಂಡಳಿ ಬೆಡ್ ಖಾಲಿಯಿಲ್ಲ ಎಂದು ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಮಗುವನ್ನು ಅಂಬುಲೆನ್ಸ್‌ನಲ್ಲಿಯೇ ಉಳಿಸಿದ್ದರಂತೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಮಗುವಿನ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಮೃತಪಟ್ಟಿದೆ.
ಮಗುವಿಗೆ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದು, ಮಗುವಿನ ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.










