ಹಿಂದಿನ ವರ್ಷದ ಬಜೆಟ್ ಓದಿ ನಗೆಪಾಟಲಿಗೀಡಾದ ಅಶೋಕ್ ಗೆಹ್ಲೋಟ್.

44
firstsuddi

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 2023-24ನೇ ಸಾಲಿನ ಬಜೆಟ್ ಮಂಡಿಸುವ ಬದಲು 2022ರ ಬಜೆಟ್ ಓದಿ ಇದೀಗ ನಗೆಪಾಟಲಿಗೀಡಾಗಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

2023-24ರ ಬಜೆಟ್ ಮಂಡಿಸಬೇಕಿದ್ದ ಗೆಹ್ಲೋಟ್ ಕಳೆದ ವರ್ಷ ಜಾರಿಗೆ ತಂದಿದ್ದ ಯೋಜನೆಗಳನ್ನೇ ಓದುತ್ತಿದ್ದರು. ಸುಮಾರು 8 ನಿಮಿಷಗಳ ಕಾಲ ಬಜೆಟ್ ಓದಿದ ನಂತರ ಸಚಿವ ಮಹೇಶ್ ಜೋಶಿ ಸಿಎಂಗೆ ಕಳೆದ ವರ್ಷದ ಬಜೆಟ್ ಓದುತ್ತಿರುವುದಾಗಿ ತಿಳಿಸಿದರು. ಬಳಿಕ ಹಳೆಯ ಬಜೆಟ್ ನಿಲ್ಲಿಸಿದ ಮುಖ್ಯಮಂತ್ರಿ ಕ್ಷಮೆಯಾಚಿಸಿದರು.

ಈ ವೇಳೆ ಬಿಜೆಪಿ ನಾಯಕರು ಪ್ರತಿಭಟನೆಗಿಳಿದು ತೀವ್ರ ಟೀಕೆಗೆ ಮುಂದಾದರು. ಬಜೆಟ್ ತಾಂತ್ರಿಕವಾಗಿ ಸೋರಿಕೆಯಾಗಿದೆ. ಬಜೆಟ್ ಪ್ರತಿಯನ್ನು ಮುಖ್ಯಮಂತ್ರಿ ಹೊರತು ಬೇರೆ ಯಾರೂ ತರುವಂತಿರಲಿಲ್ಲ. ಆದರೆ ಬಜೆಟ್ ಪ್ರತಿ ತರಲು ರಾಜ್ಯ ಸರ್ಕಾರದ ಅಧಿಕಾರಿಗಳು ದೌಡಾಯಿಸಿದ್ದರು. ಅದು ಐದಾರು ಜನರ ಕೈಗಳಿಂದ ಕೊನೆಗೆ ಮುಖ್ಯಮಂತ್ರಿ ಅವರಿಗೆ ತಲುಪಿದೆ ಎಂದು ಬಿಜೆಪಿ ಶಾಸಕ ಪ್ರತಾಪ್ ಸಿಂಗ್ ಸಿಂಘ್ವಿ ಆರೋಪಿಸಿದರು.

ಬಜೆಟ್ ಸೋರಿಕೆಯಾಗಿದೆ ಎಂಬ ಆರೋಪ ನಿರಾಕರಿಸಿದ ಗೆಹ್ಲೋಟ್, ಹಳೆಯ ಬಜೆಟ್ ಪ್ರತಿ ಓದಿರುವುದಾಗಿ ಹೇಳಿ ಕ್ಷಮೆಯಾಚಿಸಿದರು. ಹಳೆಯ ಬಜೆಟ್ ಓದಿದರೆ ಹೊಸ ಬಜೆಟ್ ಸೋರಿಕೆಯಾದ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದರು.

ಸ್ಪೀಕರ್ ಸಿಪಿ ಜೋಶಿ ಅವರು ಸುವ್ಯವಸ್ಥೆ ಕಾಪಾಡುವಂತೆ ಕೇಳಿಕೊಂಡರೂ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದ್ದರಿಂದ ಸದನವನ್ನು ಅರ್ಧ ಗಂಟೆ ಮುಂದೂಡಲಾಯಿತು. ಕಲಾಪ ಮುಂದೂಡಿದ ನಂತರ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.