ಚಿಕ್ಕಮಗಳೂರು : ಹಿಂದೂ ಧರ್ಮ ಅತ್ಯಂತ ಶ್ರೇಷ್ಠವಾದ ಮತ್ತು ಶಾಶ್ವತವಾದ ಧರ್ಮ, ಅದು ಎಂದಿಗೂ ಯಾರಿಂದಲೂ ನಾಶವಾಗದು ಎಂದು ಶೃಂಗೇರಿ ಜಗದ್ಗುರು ಶ್ರೀ ವಿದುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ನಗರದ ದೋಣಿಖಣದ ಶ್ರೀ ಕೊಲ್ಲಾಪುರದಮ್ಮನವರ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ರಾಜಗೋಪುರಕ್ಕೆ ಇಂದು ಕುಂಭಾಬಿಷೇಕ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಹಿಂದೂ ಧರ್ಮ ಅತ್ಯಂತ ಪ್ರಾಚೀನವಾದ ಮತ್ತು ಅಳಿವಿಲ್ಲದ ಧರ್ಮ, ಸರ್ವೇ ಜನಾಃ ಸುಖಿನೋ ಭವಂತು, ಎಲ್ಲರೂ ಸುಖವಾಗಿರಲಿ ಎಂದು ಹೇಳುವುದು ಹಿಂದೂ ಧರ್ಮ ಮಾತ್ರ ಎಂದು ಪ್ರತಿಪಾದಿಸಿದರು.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಧರ್ಮಕ್ಕೆ ಚ್ಯುತಿ ಬಂದಾಗ ತಾನು ಮತ್ತೆ ಮತ್ತೆ ಅವತರಿಸಿ ಧರ್ಮವನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ ಹಾಗಾಗಿ ಸನಾತನವಾದ ಹಿಂದೂ ಧರ್ಮವನ್ನು ಯಾರೂ ನಾಶ ಮಾಡಲಾಗದು ಎಂದು ತಿಳಿಸಿದರು.
ಭಗವಂತ ಧರ್ಮವನ್ನು ರಕ್ಷಿಸುವುದಾಗಿ ಹೇಳಿದ್ದಾನೆಂದು ಯಾರೂ ಕೂಡ ಸುಮ್ಮನೆ ಕುಳಿತುಕೊಳ್ಳಬಾರದು, ಅಪಪ್ರಚಾರಗಳಿಗೆ ಕಿವಿಗೊಡಬಾರದು, ಎಂತಹ ಮತ್ತು ಯಾವುದೇ ಪರಿಸ್ಥಿತಿಯಲ್ಲೂ ಧರ್ಮವನ್ನು ಬಿಡಬಾರದು, ಪ್ರತಿಯೊಬ್ಬರೂ ಧರ್ಮಾಚರಣೆ ಮಾಡುವ ಮೂಲಕ ಧರ್ಮ ಪರಿಪಾಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಭಗವಂತನ ನಾಮ, ರೂಪ ಬೇರೆ ಇರಬಹುದು ಆದರೆ ಭಗವಂತ ಒಬ್ಬನೇ ಇದ್ದಾನೆ. ಬ್ರಹ್ಮ, ವಿಷ್ಣು, ಮಹೇಶ್ವರನ ರೂಪಗಳನ್ನು ಆಯಾ ಕಾರ್ಯ ಮಾಡುವುದಕ್ಕಾಗಿ ಮತ್ತು ಲೋಕದ ರಕ್ಷೆಣೆಗಾಗಿ ಭಗವಂತ ಧರಿಸಿದ್ದಾನೆ ಎಂದು ಪ್ರತಿಪಾದಿಸಿದರು.
ನಾವು ರಾಮನವಮಿ ದಿನ ರಾಮನ ರೂಪದಲ್ಲಿರುವ, ಶಿವರಾತ್ರಿ ದಿನ ಶಿವನ ರೂಪದಲ್ಲಿರುವ, ನವರಾತ್ರಿಯಲ್ಲಿ ದೇವಿ ರೂಪದಲ್ಲಿರುವ ಆ ಭಗವಂತನನ್ನೇ ಪೂಜಿಸುತ್ತೇವೆಯೇ ಹೊರತು ಬೇರೆ ಯಾವುದನ್ನೂ ಅಲ್ಲಾ ಎಂದು ಸ್ಪಷ್ಟಪಡಿಸಿದರು.
ಭಗವಂತನಿಗೆ ಭಕ್ತರಲ್ಲಿ ಯಾವುದೆ ಭೇದವಿಲ್ಲ, ಬಡವ, ಬಲ್ಲಿದ, ಪಂಡಿತ, ಪಾಮರ ಎನ್ನದೇ ತನ್ನನ್ನು ಆಶ್ರಯಿಸಿದ ಎಲ್ಲರನ್ನೂ ಸಮನಾಗಿ ಕಾಣುತ್ತಾನೆ, ಭಗವಂತ ತನ್ನನ್ನು ಆಶ್ರಯಿಸಿದವರಲ್ಲಿ ಐಶ್ವರ್ಯ, ಅಧಿಕಾರ, ಅಂತಸ್ತು ಯಾವುದನ್ನೂ ನೋಡದೇ ಕೇವಲ ಭಕ್ತಿಯನ್ನು ಮಾತ್ರ ನೋಡುತ್ತಾನೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಕೆ.ರಾಮಣ್ಣ ದೇವಾಲಯ ಅಭಿವೃದ್ದಿ ಹೊಂದಿದ ಬಗೆಯನ್ನು ವಿವರಿಸಿ ಅಭಿವೃದ್ದಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭಕ್ಕೆ ಮುನ್ನ ಆಗಮಿಸಿದ ಶ್ರೀಗಳನ್ನು ದೇವಾಲಯ ಸಮಿತಿ ವತಿಯಿಂದ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಪಾದಪೂಜೆ ನೆರವೇರಿಸಿ ಭಿನ್ನವತ್ತಳೆ ಸಮರ್ಪಿಸಲಾಯಿತು.
ಶ್ರೀಗಳು ಶ್ರೀ ಕೊಲ್ಲಾಪುರದಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಹಸ್ರಾರು ಭಕ್ತರ ಹರ್ಷೊದ್ಗಾರಗಳ ನಡುವೆ ನೂತನ ರಾಜಗೋಪುರಕ್ಕೆ ಕುಂಭಾಭಿಷೇಕ ನೆರವೇರಿಸಿದರು. ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ|| ವಿ.ಆರ್.ಗೌರಿಶಂಕರ್, ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ಉಪಸ್ಥಿತರಿದ್ದರು.










