ಬೆಳಗಾವಿ : ತಮ್ಮ ಹೇಳಿಕೆಯು ವ್ಯಾಪಕ ವಿವಾದಕ್ಕೆ ಗ್ರಾಸವಾದ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ವಿವರ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು, ಹಿಂದೂ ಪದದ ಬಗ್ಗೆ ನಾನು ತಪ್ಪು ಮಾತನಾಡಿದ್ದೇನೆ ಅಂತಾ ಸಾಬೀತಾದರೆ ಕ್ಷಮೆಯಷ್ಟೇ ಅಲ್ಲ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಹಿಂದೂ ಶಬ್ದ ಪರ್ಷಿಯನ್ ಶಬ್ದ. ದಾಖಲೆ ಇದೆ. ವಿಕಿಪೀಡಿಯಾದಲ್ಲಿ ನೋಡಬಹುದು ಅಂತಾ ಹೇಳಿದ್ದೇನೆ. ಕೆಟ್ಟ ಶಬ್ದ ಬಳಸಿದ್ದು ಡಿಕ್ಷನರಿಯಲ್ಲಿ ಇದೆ. ಆ ಡಿಕ್ಷನರಿ 1963ರಲ್ಲಿ ಪ್ರಿಂಟ್ ಆಗಿದೆ. ನಾನು ಏನು ಹೇಳಿದ್ದೇನೋ, ಇದರ ಬಗ್ಗೆ ಚರ್ಚೆ ಆಗಬೇಕು ಅಂತ ಹೇಳಿದ್ದೇನೆ. ಹಿಂದೂ ಪದ ಅಶ್ಲೀಲವಾಗಿ ಅಂತಾ ಇದ್ದಿದ್ದು ಆ ಡಿಕ್ಷನರಿಯಲ್ಲಿ ಇದೆ. ಇವರು ತಮಗೆ ಬೇಕಾದ ಹಾಗೇ ಹೇಳಿದರೆ ನಾನು ಹೇಗೆ ಉತ್ತರ ಕೊಡಬೇಕಾಗುತ್ತದೆ. ವಿಕಿಪೀಡಿಯಾದಲ್ಲಿ ಇದ್ದಿದ್ದನ್ನು ಹೇಳಿದ್ದೇನೆ ಎಂದರು.
ವಿಕಿಪೀಡಿಯದಲ್ಲಿ ಯಾರಾದರೂ ಬರೆಯಬೇಕಾದರೆ ಕಮೀಟಿ ಇದೆ. ಹಾಗೇ ಅದನ್ನು ಅಪ್ ಲೋಡ್ ಮಾಡಬಹುದು. ನಾವು ಯಾರ ಬಗ್ಗೆಯೂ ಮಾತನಾಡಲ್ಲ. ನಿಮ್ಮ ಪ್ಯಾನಲ್ ಡಿಸ್ಕಷನ್ ಲ್ಲಿ ಚರ್ಚೆ ಮಾಡಬೇಕು. ಯಾರು ಬೇಕಾದರೂ ಬರಲಿ ನನ್ನ ಸ್ಟ್ಯಾಂಡ್ ಏನಿದೆ ಅದನ್ನು ಹೇಳುತ್ತೇನೆ. ಯಾರೂ ಸಹ ನಮ್ಮ ನಿಲುವು ನೋಡೇ ಇಲ್ಲ. ನ್ಯಾಷನಲ್ ಮೀಡಿಯಾದಲ್ಲಿ ಬಂದ ತಕ್ಷಣ ಒಂದ್ ಸ್ಟ್ಯಾಂಡ್ ಆಗಿದೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಅರೆ ಬರೆ ಓದಿಕೊಂಡಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಅರೆ ಬರೆ ಓದಿಕೊಂಡಿಲ್ಲ. ನಾವು ಹಿಂದೂಗೆ ಎಲ್ಲಿ ಅವಮಾನ ಮಾಡಿದ್ದೀವಿ ಅಂತ ಸಾಬೀತು ಮಾಡಬೇಕು. ಹಲವು ಬಿಜೆಪಿ ನಾಯಕರೇ ಹಿಂದೂ ಪದ ಪರ್ಷಿಯನ್ ನಿಂದ ಬಂದಿದೆ ಅಂತಾ ಹೇಳಿದ್ದಾರೆ. ಮನುವಾದಿಗಳು ಹಾಗೂ ಸಿಸ್ಟಮ್ ಇದೆ, ವ್ಯವಸ್ಥಿತವಾಗಿ ಇದನ್ನು ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ಹೇಳಿಕೆ ಸುರ್ಜೇವಾಲಾ ಖಂಡನೆ ಮಾಡಿದ್ದಾರೆ. ಅವರು ನಮಗಿಂತ ಹಿರಿಯರು ಆಕ್ಷೇಪ ಮಾಡಲ್ಲ. ನಾವು ಮಾಡಿದ್ದಾದರೂ ಏನು? ನಾವು ಕ್ಷಮೆ ಕೇಳುವ ಪ್ರಶ್ನೆ ಇಲ್ಲ. ಸಿಎಂ ಬೊಮ್ಮಾಯಿ ಬೇಕಾದರೆ ಒಂದು ಕಮಿಟಿ ಮಾಡಲಿ. ಆ ಡಿಕ್ಷನರಿಯಲ್ಲಿ ಹಿಂದೂ ಪದದ ಅಶ್ಲೀಲ ಅಂತ ಬರೆದಿದ್ದಾರೆ, ಆ ಬಗ್ಗೆ ಚರ್ಚೆ ಮಾಡಿ ಅಂತ ಹೇಳಿದ್ದೇನೆ ಎಂದರು.
ಸಿಎಂ ತನಿಖೆ ಮಾಡಲಿ ಒಂದು ಕಮಿಟಿ ಮಾಡಿ ಸತ್ಯಾಸತ್ಯತೆ ಹೊರಗೆ ಬರುತ್ತದೆ. ಬೇರೆ ಪುಸ್ತಕಗಳಲ್ಲಿ ಉಲ್ಲೇಖ ಇದೆ. ವಿಕಿಪೀಡಿಯಾದಲ್ಲಿ ಇದೆ ಅಂತಾ ಸುರ್ಜೆವಾಲಾರಿಗೂ ತಿಳಿಸಿದ್ದೇನೆ. ನಾನು ಚುನಾವಣೆ ದೃಷ್ಟಿಯಿಂದ ಹೇಳಿದ್ದಲ್ಲ. ಈ ಬಗ್ಗೆ ಸಾಮೂಹಿಕ ಚರ್ಚೆ ಮಾಡಬೇಕು. ನಾಲ್ಕು ಜನ ಚರ್ಚೆ ಮಾಡಿದ್ದನ್ನು ನಾವು ಒಪ್ಪಿಕೊಳ್ಳಲ್ಲ. ಸತ್ಯ ಹೇಳೋದೇ ಅಪರಾಧ. ಎಲ್ಲರಿಗೂ ನ್ಯಾಯ ಕೊಡಿಸುವುದೇ ಅಪರಾಧ ಆಗಿದೆ. ನಾನು ಪರ್ಷಿಯನ್ ಪದ ಅಂತಾ ಹೇಳಿದ್ದು, ಅದರ ಬಗ್ಗೆ ಚರ್ಚೆ ಆಗಬೇಕು ಅಂತ ಹೇಳಿದ್ದೇನೆ. ಅದು ಸತೀಶ್ ಜಾರಕಿಹೊಳಿ ಸಂಶೋಧನೆ ಮಾಡಿ ಬರೆದ ಬುಕ್ ಅಲ್ಲ. ಯಾರು ಚರ್ಚೆಗೆ ಬರುತ್ತಾರೋ ಬರಲಿ, ಚರ್ಚೆಗೆ ನಾನು ಸಿದ್ಧ. ಯಡಿಯೂರಪ್ಪ, ಬೊಮ್ಮಾಯಿಗೆ ಒಂದು ಕಮಿಟಿ ರಚನೆ ಮಾಡಲು ಹೇಳಿ. ಅದರಲ್ಲಿ ಪ್ರೂವ್ ಆದರೆ ಕ್ಷಮೆ ಅಲ್ಲ, ರಾಜೀನಾಮೆ ಸಹ ನೀಡುತ್ತೇನೆ. ಯಾರು ಬರೆದಿದ್ದಾರೆ ಅವರ ಮೇಲೆ ಕೇಸ್ ಹಾಕಿ ಫೈಟ್ ಮಾಡಬೇಕು. ಇಂತಹ ವಿಷಯಗಳ ಮೇಲೆ ಹಿಂದುತ್ವ ಗಟ್ಟಿ ಮಾಡುವುದು ಬಿಜೆಪಿಯವರ ಉದ್ದೇಶವಾಗಿದೆ ಎಂದು ಕಿಡಿಕಾರಿದರು.










