ಹಿಜಾಬ್ ವಿಚಾರಣೆ ಅಂತ್ಯ ; ತೀರ್ಪನ್ನು ಕಾಯ್ದಿರಿಸಿದ ಹೈಕೋರ್ಟ್.

84
firstsuddi

ಬೆಂಗಳೂರು : ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣ ಪೀಠ ಅಂತ್ಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.

ಪರ್ದಾ ಅಥವಾ ಬುರ್ಖಾ ಕಡ್ದಾಯ ಧಾರ್ಮಿಕ ಆಚರಣೆಯಾಗದೇ ಇರಬಹುದು ಆದರೆ ಹಿಜಾಬ್ ಅಥವಾ ಹೆಡ್ ಸ್ಕಾರ್ಫ್ ಇಸ್ಲಾಮ್ ನ ಕಡ್ಡಾಯ ಭಾಗವಾಗಿದೆ. ಕೇರಳ ಹಾಗೂ ಮದ್ರಾಸ್ ಹೈಕೋರ್ಟ್ ಗಳು ಇಸ್ಲಾಮಿಕ್ ಗ್ರಂಥಗಳನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬಂದಿವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸರ್ಕಾರಿ ಪರ ವಕೀಲರು, ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದು, ಹಿಜಾಬ್ ಕೂಡ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಹೇಳಿದ್ದು ಸುಪ್ರೀಂ ಕೋರ್ಟ್ ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದೆ. ಹಿಜಾಬ್ ಸಂವಿಧಾನದ ಆರ್ಟಿಕಲ್ 25 ರ ಅಡಿಯಲ್ಲಿ ಕಡ್ಡಾಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ ನಾವದಗಿ ಹೇಳಿದ್ದಾರೆ.

ವಾದ, ಪ್ರತಿವಾದ ಆಲಿಸಿದ ಪೀಠ, ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿತು.

ಇಂದು ವಾದ ಮಂಡನೆ ಮುಕ್ತಾಯಗೊಳಿಸಬೇಕು ಮತ್ತು ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ನಿನ್ನೆ ಸೂಚನೆ ನೀಡಿತ್ತು. ಅದರಂತೆಯೇ ಇಂದು 11ದಿನಗಳ ಹೈಕೋರ್ಟ್ ವಾದಮಂಡನೆ ಮುಕ್ತಾಯವಾಗಿದೆ.