ಹಿಜಾಬ್ ವಿವಾದ – ಸೆ.12ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್.

43
firstsuddi

ನವದೆಹಲಿ : ಶಾಲಾ-ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದೆ. ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಲ್ಲ ಎಂದು ಹೇಳುವಾಗ ಕುರಾನ್ ​ನಲ್ಲಿರುವ ಸಾಲುಗಳನ್ನು ತಪ್ಪಾಗಿ ಉಲ್ಲೇಖಿಸಿದೆ ಎಂದು ವಕೀಲರಾದ ನಿಜಾಮ್ ಪಾಷಾ ಸುಪ್ರೀಂಕೋರ್ಟ್​ಗೆ ಹೇಳಿದ್ದಾರೆ. ವಾದ- ಪ್ರತಿವಾದಿಗಳ ಬಳಿಕ ಮುಂದಿನ ವಿಚಾರಣೆಯನ್ನು ಸೆ.12 ಕ್ಕೆ ಮುಂದೂಡಲಾಗಿದೆ.

ಮೊದಲ ದಿನ ವಿಚಾರಣೆಯಲ್ಲಿ ಫಿರ್ಯಾದುದಾರರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ದೇವದತ್ ಕಾಮತ್ ಅವರು, ಬಟ್ಟೆಯ ವಿಚಾರದಲ್ಲಿ ಸರ್ಕಾರ ಮಕ್ಕಳ ಶಿಕ್ಷಣವನ್ನು ಹಾಳು ಮಾಡುತ್ತಿದೆ ಎಂದು ದೂರಿದ್ದರು. ಈ ವೇಳೆ ಪೀಠ, ಮಕ್ಕಳು ಶಾಲೆಯೊಳಗೆ ಮಿಡಿ, ಸ್ಕರ್ಟ್ ಧರಿಸಿ ಬರಬಹುದೇ ಎಂದು ಪ್ರಶ್ನಿಸಿದ್ದರು. ಹೀಗಾಗಿ ಶಿಕ್ಷಣಕ್ಕೂ, ಬಟ್ಟೆಗೂ ಸಂಬಂಧವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ನಿನ್ನೆ ನಡೆದ ಎರಡನೇ ದಿನದ ವಿಚಾರಣೆಯಲ್ಲಿ ದೇವದತ್ ಕಾಮತ್  ಹಿಜಾಬ್ ಧರಿಸುವುದು ಹಕ್ಕು ಎಂದರು. ಈ ವೇಳೆ ನ್ಯಾ.ಹೇಮಂತ್ ಗುಪ್ತಾ ಅವರು ಬಟ್ಟೆ ಧರಿಸುವುದು ಹಕ್ಕಾದರೆ, ಧರಿಸದೇ ಇರುವುದು ಹಕ್ಕಿನಡಿಯೇ ಬರುತ್ತದೆ ಎಂದರು. ಈ ವೇಳೆ ಕಾಮತ್ ಶಾಲೆಯಲ್ಲಿ ಯಾರೂ ಕೂಡ ಬಟ್ಟೆ ಕಳಚಲ್ಲ ಎಂದರು. ಬಟ್ಟೆ ಹಕ್ಕಿನ ವ್ಯಾಪ್ತಿಯಲ್ಲಿ ವಾದ ಮಂಡಿಸಿದರೆ, ತಾರ್ಕಿಕ ಅಂತ್ಯ ಕಾಣದು ಎಂದು ಪೀಠ ಇದೇ ವೇಳೆ ಹೇಳಿತು.