ಹಿರಿಯ ಪತ್ರಕರ್ತ ಕೆ.ಎಸ್ ಸಚ್ಚಿದಾನಂದ ಮೂರ್ತಿ ವಿಧಿವಶ…

108
firstsuddi

ಬೆಂಗಳೂರು: ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರು ಇಂದು ವಿಧಿವಶರಾಗಿದ್ದಾರೆ. ಇವರು ಕೆಲ ದಿನಗಳ ಹಿಂದೆ ಶ್ವಾಸಕೋಶ ಕಸಿಗೆ ಒಳಗಾಗಿದ್ದರು. ಇದೀಗ ಮತ್ತೆ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಸಚ್ಚಿದಾನಂದ ಮೂರ್ತಿಯವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಕೋಲಾರ ಮೂಲದ ಸಚ್ಚಿದಾನಂದ ಮೂರ್ತಿಯವರು 1982 ರಲ್ಲಿ ದಿ ವೀಕ್ ಸೇರಿದ್ದು, ಬಳಿಕ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ದೆಹಲಿಯಲ್ಲಿ 4 ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಎಡಿಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಮಾಧ್ಯಮ ವಲಯದಲ್ಲಿ ಸಚ್ಚಿ ಎಂದೇ ಖ್ಯಾತಿ ಪಡೆದಿದ್ದ ಸಚ್ಚಿದಾನಂದ ಅವರು ಕಳೆದ ವರ್ಷ ನಿವೃತ್ತಿ ಹೊಂದಿದ್ದರು. ನಿವೃತ್ತಿಯಾಗುವವರೆಗೂ ಮಲಯಾಳ ಮನೋರಮಾ ಗ್ರೂಪ್‍ನಲ್ಲೇ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಣೆಯಲ್ಲಿ ಸಿದ್ಧಹಸ್ತರಾಗಿದ್ದರು. ನ್ಯೂ ಡೆಲ್ಲಿ ಅಂಕಣದ ಮೂಲಕ ಮನೆಮಾತಾಗಿದ್ದರು.

ಸದ್ಯ ಸಚ್ಚಿಯವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇನ್ನು ಸಚ್ಚಿ ನಿಧನಕ್ಕೆ ಮಾಧ್ಯಮ ರಂಗ ಕಂಬನಿ ಮಿಡಿದಿದೆ. ಜಯನಗರ ಟಿ ಬ್ಲಾಕ್‍ನಲ್ಲಿ, ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ 6 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ.